ಕಿರುತೆರೆ ಎಂಬುದು ಸ್ಟಾರ್ ಪಟ್ಟ ಗಳಿಸಲು ಒಂದು ಮಾರ್ಗವೇ ಸರಿ. ಕಲಾವಿದರು ಕನಸು ನನಸು ಮಾಡಿಕೊಳ್ಳಲು ಹಲವು ದಾರಿಗಳನ್ನು ಆರಿಸುತ್ತಾರೆ. ಕೆಲವರು ಮಾಡೆಲಿಂಗ್ ಆರಿಸಿಕೊಂಡ್ರೆ, ಮತ್ತೆ ಕೆಲವರು ಬೇರೆ ಪ್ರಾಜೆಕ್ಟ್‌ಗಳಿಂದಾಗಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ, ಹಲವು ನಟ ನಟಿಯರಿಗೆ ಟಿವಿಲೋಕ ಬ್ರೇಕ್ ನೀಡಿದೆ. ಕೆಲವರು ಕನ್ನಡ ಕಿರುತೆರೆಯಾಚೆಗೂ ತಮ್ಮ ಪರಿಧಿಯನ್ನೂ ಮೀರಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ.
ಜಯರಾಮ್ ಕಾರ್ತಿಕ್- ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಜಯರಾಮ್ ಕಾರ್ತಿಕ್ ಸಿಯಾ ಕೇ ರಾಮ್ ಮೂಲಕ ಬಾಲಿವುಡ್‌ನಲ್ಲಿ ಮನೆ ಮಾತಾಗಿದ್ದರು. ಇದರ ಜೊತೆಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ಜಯರಾಂ ಕೆಂಪೇಗೌಡ, ವಿಷ್ಣುವರ್ಧನ, ಜರಾಸಂಧ, ವರದನಾಯಕ, ಜಸ್ಟ್ ಲವ್, ಚಂದ್ರಿಕಾ, ಕೇರ್ ಆಫ್ ಫುಟ್‌ಪಾತ್-2 ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಆ ಕರಾಳ ರಾತ್ರಿ ಸಿನಿಮಾದಲ್ಲಿ ನಾಯಕರಾಗಿ ಮಿಂಚಿರುವ ಜೆಕೆ "ಓ ಪುಷ್ಪ ಐ ಹೇಟ್ ಟಿಯರ್ಸ್" ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ಕಮಾಲ್ ಮಾಡುತ್ತಿದ್ದಾರೆ.
ವಿನಯ್ ಗೌಡ- ಚಿಟ್ಟೆ ಹೆಜ್ಜೆ, ಅಂಬಾರಿ, ಅಮ್ಮ ನಿನಗಾಗಿ, ಹರಹರ ಮಹಾದೇವ, ಉಘೇ ಉಘೇ ಮಾದೇಶ್ವರ, ಜೈ ಹನುಮಾನ್ ಬಯಸದೇ ಬಳಿ ಬಂದೆ ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಪರಿಚಿತರಾದ ವಿನಯ್ ರಮೇಶ್ ಅರವಿಂದ್ 'ಶಿವಾಜಿ ಸುರತ್ಕಲ್' ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಅನುಪಮಾ ಗೌಡ - ಅಕ್ಕ ಧಾರಾವಾಹಿನಲ್ಲಿ ದ್ವಿಪಾತ್ರ ಮಾಡುವ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದ ನಗುಮುಖದ ಚೆಲುವೆ ಅನುಪಮಾ 'ಆ ಕರಾಳ ರಾತ್ರಿ' ಸಿನಿಮಾದ ಮೂಲಕ ಹಿರಿತೆರೆ ಪ್ರವೇಶಿಸಿದರು. ಇದರ ಜೊತೆಗೆ ತ್ರಯಂಬಕಮ್ ಸಿನಿಮಾದಲ್ಲಿಯೂ ಆಕೆ ನಟಿಸಿದ್ದಾರೆ. ಜೊತೆಗೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಅದ್ವಿತಿ ಶೆಟ್ಟಿ - ನಟಿಯಾಗುವ ಕನಸೇ ಇರದ ಅದ್ವಿತಿ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಚಿತ್ರದಲ್ಲಿ ತನ್ನ ಅವಳಿ ಸಹೋದರಿ ಅಶ್ವಿತಿ ಜೊತೆ ನಟಿಸಿದರು. ಮುಂದೆ ಎರಡು ಕನಸು ಧಾರಾವಾಹಿಯಲ್ಲಿಯೂ ನಟಿಸಿರುವ ಈ ಚೆಲುವೆ, ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿ. ಫ್ಯಾನ್ , ಕಾರ್ಮೋಡ ಸರಿದು ಹಾಗೂ ಸುಳ್ಳಿ ಎಂಬ ಸಿನಿಮಾಗಳಲ್ಲಿಯೂ ಅದ್ವಿತಿ ಅಭಿನಯಿಸಿದ್ದಾರೆ.
ಅದಿತಿ ಪ್ರಭುದೇವ - ಗುಂಡ್ಯಾನ ಹೆಂಡ್ತಿ, ನಾಗ ಕನ್ನಿಕೆ ಧಾರಾವಾಹಿಯಲ್ಲಿ ಪರಿಚಿತರಾದ ಅದಿತಿ ನಂತರ ಧೈರ್ಯಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಮುಂದೆ ಬಜಾರ್, ಆಪರೇಶನ್ ನಕ್ಷತ್ರ, ಸಿಂಗ, ಬ್ರಹ್ಮಚಾರಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾದಲ್ಲಿಯೂ ಅದಿತಿ ಕಾಣಿಸಿಕೊಳ್ಳಲಿದ್ದಾರೆ.
ಶೃತಿ ಪ್ರಕಾಶ್ - ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸುವುದರ ಮೂಲಕ ಕನ್ನಡ ಕಿರುತೆರೆಗೆ ಬಂದ ಶ್ರುತಿ ಪ್ರಕಾಶ್ ಹಿಂದಿಯ 'ಸಾಥ್ ನಿಬಾನ ಸಾಥಿಯಾ' ಧಾರಾವಾಹಿಯಲ್ಲಿ ನಟಿಸಿದ್ದರು. ಬಿಗ್‌ಬಾಸ್ ನಂತರ ಸಿನಿಮಾದತ್ತ ಮುಖ ಮಾಡಿದ ಶ್ರುತಿ 'ಲಂಡನ್‌ನಲ್ಲಿ ಲಂಬೋದರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ರಮೋದ್-ಮಹಾದೇವಿ, ಚುಕ್ಕಿ ಧಾರಾವಾಹಿಯಲ್ಲಿ ಅಭಿನಯಿಸಿರುವ ಪ್ರಮೋದ್, 'ಗೀತಾ ಬ್ಯಾಂಗಲ್ಸ್ ಸ್ಟೋರ್' ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಮುಂದೆ ಪ್ರೀಮಿಯರ್ ಪದ್ಮಿನಿಯಲ್ಲಿ ಅಭಿನಯಿಸಿರುವ ಪ್ರಮೋದ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.