ಸ್ಯಾಂಡಲ್ ವುಡ್ನಲ್ಲಿ ಮಾಸ್ ಮ್ಯಾನರಿಸಂನಿಂದಲೇ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಲೂಸ್ ಮಾದ ಯೋಗೇಶ್ ಸದ್ಯ 'ಹೆಡ್ ಬುಷ್', 'ಪರಿಮಳ ಲಾಡ್ಜ್', 'ಒಂಬತ್ತನೇ ದಿಕ್ಕು' ಹೀಗೆ ಬ್ಯಾಕ್ ಟೂ ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯ ಗಣೇಶೋತ್ಸವ ದಿನ ಅಭಿಮಾನಿಗಳ ಮುಂದೆ ಬರಲು ಸಿದ್ದರಾಗಿದ್ದು, 'ಲಂಕೆ' ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಸಾಹಸ ಪ್ರಧಾನ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. 'ಲಂಕೆ' ಒಂದು ಉತ್ತಮ ಸಂದೇಶ ಇರುವ ಸಿನಿಮಾ. ಈ ಕಾರಣಕ್ಕಾಗಿ ಸೆಪ್ಟೆಂಬರ್ 10 ಗೌರಿ ಗಣೇಶ್ ಹಬ್ಬಕ್ಕೆ ತೆರೆ ಮೇಲೆ ತರಲು ಸಿದ್ಧರಾಗಿದ್ದೇವೆ. ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇದ್ದರೂ ಕೂಡ, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಲಂಕೆ' ಚಿತ್ರವನ್ನ ಬಿಡುಗಡೆ ನಿರ್ಧರಿಸಿದ್ದೇವೆ ಎಂದು ನಿರ್ದೇಶಕ ರಾಮ್ ಪ್ರಸಾದ್ ಹೇಳಿದ್ದಾರೆ.
ಲೂಸ್ ಮಾದ ಯೋಗೇಶ್ ಜೊತೆ ರಾಷ್ಟ್ರ ಪ್ರಶಸ್ತಿ ವಿಜೇತ, ನಟ ದಿವಂಗತ ಸಂಚಾರಿ ವಿಜಯ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಕಾವ್ಯ ಶೆಟ್ಟಿ ಯೋಗಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಗಣೇಶ ಹಬ್ಬಕ್ಕೆ ಲಂಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಪಾತ್ರದಲ್ಲಿ ಎರಡು ಶೇಡ್ ಇದೆ.
ಥಿಯೇಟರ್ ನಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ಇದ್ದರೂ, ನಿರ್ಮಾಪಕರು ಧೈರ್ಯ ಮಾಡಿ ಸಿನಿಮಾವನ್ನ ಬಿಡುಗಡೆ ಮಾಡುತ್ತಿದ್ದಾರೆ. ನಿರ್ಮಾಪಕರ ಸಿನಿಮಾ ಫ್ಯಾಷನ್ಗೆ ಮೆಚ್ಚಬೇಕು ಎಂದು ನಿರ್ದೇಶಕರು ಹೇಳಿದ್ರು. ಇನ್ನು ಕೃಷಿ ತಾಪಂಡ ಮಾತನಾಡಿ, ಎರಡು ವರ್ಷಗಳ ಬಳಿಕ, ನನ್ನ ಸಿನಿಮಾ ಬಿಡುಗಡೆ ಆಗುತ್ತಿರೋದು ತುಂಬಾನೇ ಎಕ್ಸೈಟ್ಮೆಂಟ್ ಆಗ್ತಿದೆ ಅಂದ್ರು.
ಶರತ್ ಲೋಹಿತಾಶ್ವ, ಶೋಭ್ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಚಿತ್ರದಲ್ಲಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖಾ ರಾಮಪ್ರಸಾದ್ ನಿರ್ಮಾಣ ಮಾಡಿದ್ದಾರೆ. ರಾಮ್ ಪ್ರಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಟ್ರೇಲರ್ ನಿಂದಲೇ ಸದ್ದು ಮಾಡ್ತಾ ಇರೋ ಲಂಕೆ ಸಿನಿಮಾ ಪ್ರೇಕ್ಷಕರಿಗೆ ಎಷ್ಟು ಇಷ್ಟ ಆಗಲಿದೆ ಅನ್ನೋದು ಗಣೇಶ ಹಬ್ಬದ ದಿನದಂದು ಗೊತ್ತಾಗಲಿದೆ.