ಚಿಕ್ಕಮಗಳೂರು: ಹುಟ್ಟೂರು ಪಂಚನಹಳ್ಳಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಟ ಸಂಚಾರಿ ವಿಜಯ್ ಅಂತ್ಯಕ್ರಿಯೆ ನೆರವೇರಿದೆ. ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಸಂಚಾರಿ ವಿಜಯ್ ಬೆಂಗಳೂರಲ್ಲಿ ತಮ್ಮ ಗೆಳೆಯ ನವೀನ್ ಜೊತೆ ಜೂನ್ 12 ರಂದು ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ಹೋಗುವಾಗ ರಸ್ತೆ ಅಪಘಾತವಾಗಿತ್ತು. ವಿದ್ಯುತ್ ಕಂಬಕ್ಕೆ ಹೋಗಿ ಬೈಕ್ ಗುದ್ದಿತ್ತು ಎನ್ನಲಾಗ್ತಿದೆ. ತಕ್ಷಣವೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸಿ.ಟಿ. ಸ್ಕ್ಯಾನ್ ಮಾಡಿದ ನಂತರದಲ್ಲಿ ವಿಜಯ್ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿರೋದು ವೈದ್ಯರಿಗೆ ಗೊತ್ತಾಗಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ನ್ಯೂರೋ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದ್ದರೂ ಕೂಡ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅವರ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿದೆ, ಏನೂ ಹೇಳಲಾಗಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು.
ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡಿದ್ದಾರೆ. ನಟನೆ ಜೊತೆಗೆ ಸಾಮಾಜಿಕ ಕೆಲಸ ಮಾಡೋದರಲ್ಲಿ ಸಂಚಾರಿ ವಿಜಯ್ ಅವರು ಹೆಚ್ಚು ಗುರುತಿಸಿಕೊಂಡಿದ್ದರು. ನಾತಿಚರಾಮಿ, ಹರಿವು, ಆ್ಯಕ್ಟ್ 1978 ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್ ಜನಮಾನಸದಲ್ಲಿ ಉಳಿದಿದ್ದಾರೆ.