ಹುಬ್ಬಳ್ಳಿ: ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ಹಾಗೂ ಎಂ.ರಮೇಶ ರೆಡ್ಡಿ ನಿರ್ಮಿಸಿರುವ '100' ಸಿನಿಮಾ ಇದೇ 19ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಟ ಹಾಗೂ ನಿರ್ದೇಶಕ ರಮೇಶ ಅರವಿಂದ್ ತಿಳಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಚಿತ್ರದಲ್ಲಿ ನನ್ನ ಎಲ್ಲ ಶಕ್ತಿಯನ್ನು ಹಾಕಿ ನಟಿಸಿದ್ದೇನೆ. ಇದೊಂದು ಸೋಶಿಯಲ್ ಮೀಡಿಯಾ ಆಧಾರಿತ ಕತೆ ಎಂದು ತಿಳಿಸಿದರು.
ಮೊಬೈಲ್ನಿಂದ ಏನೆಲ್ಲ ನಡೆಯುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಮೊಬೈಲ್ನಿಂದ ಒದ್ದಾಡುವ ಒಂದು ಕುಟುಂಬದ ಕತೆಯನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವಂತೆ ಚಿತ್ರೀಕರಿಸಲಾಗಿದೆ. ಸಿನಿಮಾದಲ್ಲಿ ನಾನು ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರ ಅದ್ಭುತವಾಗಿ ಬಂದಿದೆ. ಕತೆ ಎಲ್ಲರನ್ನ ಹಿಡಿದಿಡುತ್ತೆ ಅನ್ನೋ ನಂಬಿಕೆ ನಮಗಿದೆ ಎಂದರು.
ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ ಸುಧೀರ್, ಗೌರವ ಪ್ರಕಾಶ ಬೆಳವಾಡಿ, ರಾಜು ತಾಳಿಕೋಟೆ, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಲ್ಲದೇ ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಸಾಮಾಜಿಕ ಜಾಲತಾಣದ ವಿಷಯ ವಸ್ತು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.
ಒಟ್ಟು 4 ಹಾಡುಗಳನ್ನು ಸಿನಿಮಾ ಹೊಂದಿದೆ. ಶ್ರೀರಂಗಪಟ್ಟಣ ಸೇರಿದಂತೆ ಬೆಂಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ ಎಂದರು.