ಪೈರಸಿ ವಿಷಯ ಕಳೆದ ಕೆಲವು ದಿನಗಳಿಂದ ಬಹಳ ಸುದ್ದಿ ಮಾಡುತ್ತಿದೆ. ಪ್ರಮುಖವಾಗಿ ತಮ್ಮ'ಹೀರೋ' ಚಿತ್ರ 3ನೇ ದಿನಕ್ಕೆ ಪೈರಸಿ ಆಗೋಯ್ತು ಎಂದು ನಟ -ನಿರ್ದೇಶಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಪೈರಸಿ ಪ್ರೋತ್ಸಾಹಿಸುವ ಕೆಲವು ಆ್ಯಪ್ ಮತ್ತು ವೆಬ್‍ಸೈಟ್‍ಗಳನ್ನು ಯಾಕೆ ಬ್ಯಾನ್ ಮಾಡಲಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದರು.
ಅದರ ಹಿಂದೆಯೇ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಒಂದು ಪಕ್ಷ ತಮ್ಮ ಚಿತ್ರವನ್ನೇನಾದರೂ ಪೈರಸಿ ಮಾಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ಅವರನ್ನು ಕೋರ್ಟ್-ಕಚೇರಿ ಎಂದು ಅಲೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಸದ್ಯ ಈ ಕುರಿತು ನಟ ಪುನೀತ್ ರಾಜ್ಕುಮಾರ್ ಮೊದಲ ಬಾರಿಗೆ ಮಾತನಾಡಿದ್ದಾರೆ.'ಯುವರತ್ನ' ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಬಹಳ ಬೆಳೆದಿದೆ. ಹಾಗಾಗಿ, ಪೈರಸಿ ವಿರುದ್ಧ ಫೈಟ್ ಮಾಡುವುದು ಬಹಳ ಕಷ್ಟ. ಮೊದಲಿಗೆ ನಾವು ಬದಲಾಗಬೇಕಿದೆ. ನಿಮಗೆ ಪೈರಸಿ ಕಾಪಿ ಸಿಕ್ಕರೆ ದಯವಿಟ್ಟು ನೋಡಬೇಡಿ. ಅದನ್ನು ಡಿಲೀಟ್ ಮಾಡುವುದಕ್ಕೆ ಸಹಾಯ ಮಾಡಿ. ಏಕೆಂದರೆ, ನಾವು ಬದಲಾಗಲಿಲ್ಲ ಎಂದರೆ, ಏನೂ ಬದಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಇನ್ನು, ಪೈರಸಿ ತಡೆಗಟ್ಟುವುದಕ್ಕೆ ಚಿತ್ರತಂಡದಿಂದ ಏನಾದರೂ ಹೆಲ್ಪ್ಲೈನ್ ಅಥವಾ ಸ್ಕ್ವಾಡ್ ನಿರ್ಮಾಣವಾಗಲಿದೆಯಾ ಎಂದರೆ, ಏನೇ ಹೆಲ್ಪ್ ಲೈನ್ ಇದ್ದರೂ ಕಷ್ಟ. ಆದರೂ ನಾವು ಪೈರಸಿ ತಡೆಯುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಿಮಗೆ ಎಲ್ಲಾದರೂ ಚಿತ್ರದ ಪೈರಸಿ ಆಗಿರುವ ವಿಷಯ ಗೊತ್ತಾದರೆ, ದಯವಿಟ್ಟು ನಮ್ಮ ತಂಡಕ್ಕೆ ತಿಳಿಸಿ ಎಂದು ಅವರು ಮನವಿ ಮಾಡಿದ್ದಾರೆ.