ಕಾಮಿಡಿ ಅಭಿನಯದಿಂದ ಮಿಂಚಿದ್ದ ಕೋಮಲ್ ಕುಮಾರ್ ಯಾಕೋ ಸೀರಿಯಸ್ ಆಗಿಬಿಟ್ಟಿದ್ದಾರೆ. ಅವರ ಎಂದಿನ ಶೈಲಿ ಈ ‘ಕೆಂಪೇಗೌಡ 2’ ಸಿನಿಮಾದಲ್ಲಿ ಮಿಸ್ ಆಗಿದ್ದು ಅವರೊಬ್ಬ ಹೊರಾಟಗಾರ ಪೊಲೀಸ್ ಅಧಿಕಾರಿ ಆಗಿದ್ದಾರೆ.
ಹೌದು, ಸಿನಿಮಾದಲ್ಲಿ ಹೀರೋ ಷಡ್ಯಂತ್ರಕ್ಕೆ ಸಿಲುಕಿ ಖಳನಟರ ಗ್ಯಾಂಗ್ನಿಂದ ಹೊಡೆತ ತಿಂದ ಮೇಲೆ, ತಕ್ಷಣ ಎದ್ದು ಬಂದು ಹೊಡೆದಾಡುವುದೆಲ್ಲ ಕಾಮನ್. ‘ಹೆಬ್ಬುಲಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಖಳ ನಟರಿಂದ ಸಖತ್ ಒದೆ ತಿಂದು ಆಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲೇ ‘ಕೆಂಪೇಗೌಡ 2’ ಸಿನಿಮಾ ಕ್ಲೈಮಾಕ್ಸ್ ಇದೆ.
ಕೆಂಪೇಗೌಡ 2 ಈ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ ಕೆಂಪೇಗೌಡ (ತಮಿಳು ಚಿತ್ರ ಸಿಂಗಮ್ ರಿಮೇಕ್) ಮುಂದುವರೆದ ಭಾಗ ಅಲ್ಲ. ಆದರೆ, ಈ ಕೆಂಪೇಗೌಡ ಸಹ ಪೊಲೀಸ್ ಅಧಿಕಾರಿ. ಇವನು ಅಮಾಯಕರ ಕಷ್ಟಗಳಿಗೆ ಮಿಡಿಯುವ ಅಧಿಕಾರಿ. ಚುನಾವಣೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಗ್ಗೆ ಹಾಗೂ ಮಾಜಿ ಮುಖ್ಯಮಂತ್ರಿಯ ಮಗ ಅನುಸರಿಸುವ ರೀತಿಯನ್ನು ಪ್ರಶ್ನಿಸುವ ಅಧಿಕಾರಿ ಪಾತ್ರದಲ್ಲಿ ಕೋಮಲ್ ಕಾಣಿಸಿಕೊಂಡಿದ್ದಾರೆ.
ಕೆಂಪೇಗೌಡ ನಿಷ್ಠಾವಂತ ಪೊಲೀಸ್ ಅಧಿಕಾರಿ. ಅವನ ಭುಜಬಲ ಪರಾಕ್ರಮ ಜೋರಾಗೆ ಇದೆ. ಇದರ ಜೊತೆಗೆ ಶೂಟ್ ಔಟ್ ಮಾಡುವುದರಲ್ಲೂ ನಿಸ್ಸೀಮ. ಇಲಾಖೆಯಲ್ಲಿ ಹಲವು ವಿಭಾಗಕ್ಕೆ ಶಿಫ್ಟ್ ಕೂಡ ಆಗುವ ಈತ, ಕೆಲಸಕ್ಕೆ ಬೆಂಬಿಡದೇ ಹಾತೊರೆಯುತ್ತಾನೆ. ನೊಂದ ಕುಟುಂಬಕ್ಕೆ ನೆಮ್ಮದಿ ನೀಡುವುದಕ್ಕೆ ಹಾಗೂ ಚುನಾವಣೆ ಸಮಯದಲ್ಲಿ ಹ್ಯಾಕ್ ಮಾಡಿ ಗೆಲ್ಲುವುದನ್ನು ತಪ್ಪಿಸಲು ಕೆಂಪೇಗೌಡ ಹರಸಾಹಸ ಮಾಡುತ್ತಾನೆ.
ನಟನೆಯಲ್ಲಿ ಕೋಮಲ್ ಕುಮಾರ್ ಸೀರಿಯಸ್ ಆಗಿದ್ದು, ಹೊಡೆದಾಟದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಆಟಗಾರ ಶ್ರೀಶಾಂತ್ ಖಳನಟನಾಗಿ ಗಮನ ಸೆಳೆಯುತ್ತಾರೆ. ಖಳನ ಶೇಡ್ನಲ್ಲಿ ಲೂಸ್ ಮಾದ ಯೋಗಿ ಸಹ ಪುಟ್ಟ ಪಾತ್ರ ಮಾಡಿದ್ದಾರೆ. ಇಲ್ಲಿ ನಾಯಕಿಯರಿಗೆ ಏನೂ ಜಾಗವಿಲ್ಲ.
ಒಂದು ಬ್ಯಾಕ್ಗ್ರೌಂಡ್ ಸ್ಕೋರ್ ಹಾಗೂ ಐಟಂ ಹಾಡು ಸುಮಾರಾಗಿದೆ. ಛಾಯಾಗ್ರಹಣದಲ್ಲಿ ಅಂತಹ ವಿಶೇಷತೆ ಕಾಣುವುದಿಲ್ಲ. ಕೋಮಲ್ ಕುಮಾರ್ ಆಯ್ಕೆಯಲ್ಲಿ ಎಡವಿದರಾ ಎಂಬ ಡೌಟ್ ಅಂತೂ ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಮೂಡುತ್ತದೆ.