ಮಂಡ್ಯ: ಇಂದು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮದಿನ. ಈ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟೂಡಿಯೋ ದಲ್ಲಿರೋ ಅಂಬಿ ಸಮಾಧಿಗೆ ಅವರ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಹಾಗೂ ನೂರಾರು ಅಭಿಮಾನಿಗಳು ಪೂಜೆ ಸಲ್ಲಿಸಿದ್ರು. ಈ ವೇಳೆ, ಮಳವಳ್ಳಿ ಮೂಲದ ಅಂಬಿಯ ಅಭಿಮಾನಿ ನಾಗೇಶ್, ತಮ್ಮ ಮಗಳ ಮದುವೆ ಆಹ್ವಾನ ಪತ್ರಿಕೆಯನ್ನು ಅಂಬರೀಶ್ ಸಮಾಧಿ ಮೇಲಿಟ್ಟು ಆಶೀರ್ವಾದ ಪಡೆದರು.
ಬಳಿಕ ಮಾತಾಡಿದ ಅವರು, ನಾನು ನಲವತ್ತು ವರ್ಷಗಳಿಂದ ಅಂಬರೀಶ್ ಅವರ ಅಭಿಮಾನಿ. ಅವರಂದ್ರೆ ನನಗೆ ಪಂಚಪ್ರಾಣ. ಅವರ ಪ್ರತಿ ಜನ್ಮದಿನಕ್ಕೆ ವಿಶ್ ಮಾಡುತ್ತಿದ್ದೆ. ಅದ್ರೆ, ಈ ಬಾರಿ ಅವರಿಲ್ಲ ಎನ್ನುವ ಬೇಸರವಿದೆ. ಮದುವೆಗೆ ಅಂಬಿಯಣ್ಣನನ್ನು ಆಹ್ವಾನಿಸುವ ಆಸೆಯಿತ್ತು. ಅವರಿಲ್ಲದ ಕಾರಣ ಅವರ ಸಮಾಧಿ ಬಳಿ ಲಗ್ನಪತ್ರಿಕೆ ಇಟ್ಟು ಆಶೀರ್ವಾದ ಪಡೆದಿದ್ದೇನೆ ಅಂತಾ ಭಾವುಕರಾಗಿ ಹೇಳಿದರು. ಇನ್ನು ಸಮಾಧಿ ಬಳಿ ದಾಸರ ಹಳ್ಳಿಯ ಅಂಬಿ ಅಭಿಮಾನಿಗಳು 25 ಕೆ.ಜಿ ತೂಕದ ಕೇಕ್ ಅನ್ನು ಪುಟ್ಟ ಮಕ್ಕಳಿಂದ ಕತ್ತರಿಸಿ ಸಂಭ್ರಮಿಸಿದರು. ಸಮಾಧಿ ಬಳಿ ನೂಕು ನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ್ರು.