ಎ.ಆರ್. ರೆಹಮಾನ್, ಭಾರತೀಯ ಚಿತ್ರರಂಗದ ಸಂಗೀತ ಮಾಂತ್ರಿಕ ಎಂದೇ ಹೆಸರಾದವರು. ಈ ಖ್ಯಾತ ಸಂಗೀತ ನಿರ್ದೇಶಕ ಇಂದು ತಮ್ಮ 53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ಸಂಗೀತ ನಿರ್ದೇಶಕನ ಹುಟ್ಟುಹಬ್ಬವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
06 ಜನವರಿ 1966 ರಂದು ಚೆನ್ನೈನಲ್ಲಿ ಜನಿಸಿದ ರೆಹಮಾನ್ ಮೊದಲ ಹೆಸರು ಎ.ಎಸ್. ದಿಲೀಪ್ ಕುಮಾರ್. ರೆಹಮಾನ್ ಅವರ ತಂದೆ ಆರ್.ಕೆ. ಶೇಖರ್ ಕೂಡಾ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದರು. ಚಿಕ್ಕಂದಿನಿಂದಲೇ ರೆಹಮಾನ್, ತಂದೆಯೊಂದಿಗೆ ಸ್ಟುಡಿಯೋಗೆ ತೆರಳಿ ರೆಕಾರ್ಡಿಂಗ್ನಲ್ಲಿ ಸಹಾಯ ಮಾಡುತ್ತಿದ್ದರು. ತಂದೆ ನಿಧನರಾದಾಗ ರೆಹಮಾನ್ಗೆ 9 ವರ್ಷ ವಯಸ್ಸು. ಕುಟುಂಬ ನಿರ್ವಹಣೆಗಾಗಿ ರೆಹಮಾನ್ ಓದು ಮೊಟಕುಗೊಳಿಸಿ ಚಿಕ್ಕವಯಸ್ಸಿನಲ್ಲೇ ಫುಲ್ ಟೈಮ್ ಸಂಗೀತಗಾರನಾಗಿ ಕೆಲಸ ಆರಂಭಿಸಿದರು. ಕೀಬೋರ್ಡ್ ಕಲಾವಿದರಾದ ರೆಹಮಾನ್ ಕ್ರಮೇಣ ವೈಲಿನ್, ಹಾರ್ಮೊನಿಯಂ, ಗಿಟಾರ್ ಸೇರಿದಂತೆ ಇನ್ನಿತರ ಸಂಗೀತ ಉಪಕರಣಗಳನ್ನು ನುಡಿಸಲು ಕಲಿತರು. ಸ್ನೇಹಿತರೊಂದಿಗೆ ಸೇರಿ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು.
ಇಳಯರಾಜ, ರಮೇಶ್ ನಾಯ್ಡು, ರಾಜ್ಕೋಟಿ, ಜಾಕೀರ್ ಹುಸೇನ್ ಹಾಗೂ ಇನ್ನಿತರ ಸೆಲಬ್ರಿಟಿಗಳ ಮಾರ್ಗದರ್ಶನದೊಂದಿಗೆ ಕೆಲಸ ಮಾಡುತ್ತಿದ್ದ ರೆಹಮಾನ್ ಕಿರುತೆರೆಯ ಡಾಕ್ಯುಮೆಂಟರಿ, ಜಿಂಗಲ್ ಹಾಗೂ ಜಾಹೀರಾತುಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದರು. 1992 ರಲ್ಲಿ ಅರವಿಂದ್ ಸ್ವಾಮಿ ಹಾಗೂ ಮಧು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ರೋಜಾ' ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಪಯಣ ಆರಂಭಿಸಿದ ಎ.ಆರ್. ರೆಹಮಾನ್ ಇದುವೆಗೂ ಬಹುತೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರು ಸಂಗೀತ ನಿರ್ದೇಶನ ಮಾಡಿರುವ ಸಿನಿಮಾದ ಹಾಡುಗಳು ಎವರ್ ಗ್ರೀನ್.
ಎ.ಆರ್. ರೆಹಮಾನ್ ದೇಶ, ವಿದೇಶಗಳಲ್ಲಿ ಕೂಡಾ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸಂಗೀತ ನಿರ್ದೇಶನ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ರೆಹಮಾನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತ ಮಾಂತ್ರಿಕನ ಹುಟ್ಟುಹಬ್ಬಕ್ಕೆ ಕಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್, ಮಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳ ಸೆಲಬ್ರಿಟಿಗಳು ಶುಭ ಕೋರಿದ್ದಾರೆ.