ಈ ವರ್ಷದ ನಾಡಪ್ರಭು ಶ್ರೀ ಕೆಂಪೇಗೌಡ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಈ ಬಾರಿ ಒಟ್ಟು 100 ಸಾಧಕರಿಗೆ ಈ ಪ್ರಶಸ್ತಿ ಲಭಿಸುತ್ತಿದ್ದು, ಕನ್ನಡ ಚಿತ್ರರಂಗದಿಂದ ಮೂವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ಇಂದು ಸಂಜೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಿನಿಮಾ ಕ್ಷೇತ್ರದಲ್ಲಿ ಈ ಬಾರಿ ಕೆಂಪೇಗೌಡ ಪ್ರಶಸ್ತಿಯನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ರತ್ನಂ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ಅವರಿಗೆ ನೀಡಲಾಗುತ್ತಿದೆ. ಇಂದು ಸಂಜೆ 5.30ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಧಕರಿಗೆ ಪ್ರಶಸ್ತಿ ನೀಡಲಿದ್ದಾರೆ. ಸುಮಾರು 16 ವಿಭಾಗಗಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 50,000 ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಹಾಗೂ ಶ್ರೀ ಕೆಂಪೇಗೌಡ ಅವರ ಸೊಸೆ ಲಕ್ಷ್ಮಿದೇವಿ ಹೆಸರಿನಲ್ಲಿ ಕೂಡಾ 10 ಪ್ರಶಸ್ತಿಗಳು ನೀಡಲಾಗುವುದು. ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಪ್ರಶಸ್ತಿ ವಿತರಣೆ ಸಮಯದಲ್ಲಿ ಹಾಜರಿರುತ್ತಾರೆ. ಮಾಧ್ಯಮ ಕ್ಷೇತ್ರದಿಂದ ಈಟಿವಿ ಭಾರತದ ರೀಜನಲ್ ನ್ಯೂಸ್ ಕೋಆರ್ಡಿನೇಟರ್ ಪ್ರವೀಣ್ ಅಕ್ಕಿ ಹಾಗೂ ಇತರರಿಗೆ ಪ್ರಶಸ್ತಿ ಲಭಿಸಿದೆ.