ಒಂದಲ್ಲ, ಎರಡಲ್ಲ. ತಮ್ಮ ನಿರ್ದೇಶನದ ಮೋಡಿಯಿಂದ ಬರೋಬ್ಬರಿ 10 ರಾಷ್ಟ್ರ ಪ್ರಶಸ್ತಿಗಳು ಮತ್ತು 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ಎಸ್.ಸೇತುಮಾಧವನ್ (90) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಇವರು ತಮಿಳುನಾಡಿನ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಸೇತುಮಾಧವನ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ: 'ಬೆಳ್ಳಿ ಕಾಲುಂಗುರ', 'ಯುದ್ಧಕಾಂಡ' ಚಿತ್ರದ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ
ಸೇತುಮಾಧವನ್ ಅವರು ಮಲಯಾಳಂ ಮಾತ್ರವಲ್ಲದೇ, ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾ ಸೇರಿ ಒಟ್ಟು 70 ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. 1960ರಲ್ಲಿ ತೆರೆಕಂಡ 'ಜ್ಞಾನ ಸುಂದರಿ' ಇವರ ಚೊಚ್ಚಲ ಸಿನಿಮಾವಾಗಿದೆ. 1991ರಲ್ಲಿ ಬಿಡುಗಡೆಯಾದ 'ವೇನಲ್‌ಕಿನಾವುಗಳ್' ಇವರ ನಿರ್ದೇಶನದಲ್ಲಿ ಮೂಡಿ ಬಂದ ಕೊನೆಯ ಚಿತ್ರವಾಗಿದೆ.
10 ರಾಷ್ಟ್ರ ಪ್ರಶಸ್ತಿ, 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, 4 ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ಒಂದು ನಂದಿ ಅವಾರ್ಡ್ ಅನ್ನು ಸೇತುಮಾಧವನ್ ಅವರಿಗೆ ನೀಡಿ ಗೌರವಿಸಲಾಗಿದೆ.