ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ವಿನಯ್ ರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ' 10' ಚಿತ್ರತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವಿನಯ್ ರಾಜ್ಕುಮಾರ್ ಈ ಚಿತ್ರದಲ್ಲಿ ಕಿಕ್ ಬಾಕ್ಸರ್ ಆಗಿ ಮಿಂಚಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಲಾಕ್ಡೌನ್ ಸಮಯದಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಈ ತಿಂಗಳ 25 ರಂದು '10' ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ವಿನಯ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಕೂಡಾ ದೊರೆತಿತ್ತು. ಇದೀಗ '10' ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ತಾತ, ದೊಡ್ಡಪ್ಪ, ಚಿಕ್ಕಪ್ಪನ ಹಾದಿಯಲ್ಲೇ ಸಾಗಿರುವ ವಿನಯ್ ರಾಜ್ಕುಮಾರ್, '10' ಚಿತ್ರದಲ್ಲಿ ಬಾಕ್ಸಿಂಗ್ ರಿಂಗ್ ತೊಟ್ಟಿದ್ದಾರೆ. ಇದು ಕ್ರೀಡಾ ಪ್ರಧಾನ ಚಿತ್ರವಾಗಿದ್ದು ನವ ನಿರ್ದೇಶಕ ಕರಮ್ ಚಾವ್ಲಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಣ್ಣಾವ್ರ ಮೊಮ್ಮಗನ ಜೊತೆ ಅನುಷಾ ರಂಗನಾಥ್ ಡ್ಯೂಯೆಟ್ ಹಾಡಿದ್ದಾರೆ. ಸಿನಿಮಾ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ. ಚಿತ್ರತಂಡ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಅಕ್ಟೋಬರ್ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
