'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಮಹಾಲಕ್ಷ್ಮಿ ಆಗಿ ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಕರಿಯರ್ ಆರಂಭಿಸಿದ ಯಾಮಿ ಗೌತಮ್ 'ವಿಕಿ ಡೋನರ್' ಚಿತ್ರದ ಮೂಲಕ ಬಾಲಿವುಡ್ಗೆ ಹಾರಿದರು. ಯಾಮಿ ಬಾಲಿವುಡ್ ಜರ್ನಿಗೆ ಇದೀಗ 8 ವರ್ಷಗಳು ತುಂಬಿವೆ.
ಈ 8 ವರ್ಷಗಳಲ್ಲಿ ಯಾಮಿ ಗೌತಮ್ಗೆ ಇನ್ನೂ ಸಾಧಿಸಿದ ತೃಪ್ತಿ ದೊರೆತಿಲ್ಲವಂತೆ. ನಾನು ಕಲಿಯುವುದು ಇನ್ನೂ ಹೆಚ್ಚಿದೆ ಎನ್ನುತ್ತಾರೆ ಈ ನಟಿ. ವಿಕಿ ಡೋನರ್ ನಂತರ ಬದ್ಲಾಪುರ್, ಸನಮ್ ರೇ, ಕಾಬಿಲ್, ಸರ್ಕಾರ್ 3, ಉರಿ-ದಿ ಸರ್ಜಿಕಲ್ ಸ್ಟ್ರೈಕ್, ಬಾಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ ಯಾಮಿ. ಈ ಹಂತಕ್ಕೆ ಬರಲು ನೆರವಾದ ನಿರ್ಮಾಪಕ , ನಿರ್ದೇಶಕರು, ಸಿನಿಮಾರಂಗದ ಪ್ರತಿಯೊಬ್ಬರಿಗೂ ಹಾಗೂ ತಮ್ಮ ಅಭಿಮಾನಿಗಳಿಗೆ ಯಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಜೀವನದಲ್ಲಿ ಬಹಳ ಏರಿಳಿತಗಳನ್ನು ಕಂಡಿದ್ಧೇನೆ. ಇದರಿಂದ ನಾನು ಬಹಳ ತಾಳ್ಮೆ ಕಲಿತಿದ್ದೇನೆ. ಅಷ್ಟೇ ಅಲ್ಲ ನನ್ನ ಪ್ರತಿಭೆ ಬಗ್ಗೆ ನನಗೆ ನಂಬಿಕೆ ಬರುವಂತೆ ಮಾಡಿದೆ ಎನ್ನುತ್ತಾರೆ ಯಾಮಿ. ಅಷ್ಟೇ ಅಲ್ಲ ಮತ್ತಷ್ಟು ಉತ್ತಮ ಪಾತ್ರಗಳೊಂದಿಗೆ ನನ್ನ ಅಭಿಮಾನಿಗಳಿಗೆ ಮನರಂಜನೆ ನೀಡಬೇಕು ಎಂಬುದು ನನ್ನ ಆಸೆ. ಇನ್ನೂ ಬಹಳಷ್ಟು ನಿರ್ಮಾಪಕ, ನಿರ್ದೇಶಕ, ನಟರು ಹಾಗೂ ಬರಹಗಾರರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ, ಇನ್ನೂ ವಿಭಿನ್ನವಾದ ಪಾತ್ರಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಯಾಮಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಸೇರಿದ ಯಾಮಿ ಗೌತಮ್ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ಲಾಕ್ಡೌನ್ ಇರುವುದರಿಂದ ಬಹಳ ದಿನಗಳಿಂದ ತಮ್ಮ ಕುಟುಂಬದವರನ್ನು ಭೇಟಿ ಆಗದೆ ಯಾಮಿ ಗೌತಮ್ ಬೇಸರ ವ್ಯಕ್ತಪಡಿಸಿದ್ದಾರೆ. ಕುಟುಂಬದವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಯೋಗ, ಅಡುಗೆ ಮಾಡುವುದು, ಪುಸ್ತಕ ಓದುವುದು, ಸ್ಕೆಚ್, ಟಿವಿ ನೋಡುವುದು, ಕುಟುಂಬದೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತೇನೆ. ಲಾಕ್ಡೌನ್ ಸಡಿಲಿಕೆ ನಂತರ ಸೇಫ್ ಆಗಿ ಮನೆ ಸೇರಿ ನನ್ನ ಕುಟುಂಬದೊಂದಿಗೆ ಕೆಲವು ದಿನಗಳು ಇದ್ದು ಬರುತ್ತೇನೆ ಎನ್ನುತ್ತಾರೆ ಯಾಮಿ.