ಮುಂಬೈ (ಮಹಾರಾಷ್ಟ್ರ) : ಬಾಲಿವುಡ್ ನಟ ಹೃತಿಕ್ ರೋಷನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹ ಹಾಗೂ ಫ್ಯಾಷನ್ ಸೆನ್ಸ್ಗೆ ಹೆಸರಾಗಿರುವ ಹೃತಿಕ್ ರೋಷನ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
'ಗ್ರೀಕ್ ಗಾಡ್' ಎಂದೇ ಪ್ರಖ್ಯಾತಿ ಪಡೆದಿರುವ ಹೃತಿಕ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದರುವ ಪ್ರತಿಭಾನ್ವಿತ ನಟ ಮತ್ತು ಅವರ ಮನಮೋಹಕ ನಟನೆ, ನೃತ್ಯ ಕೌಶಲ್ಯದಿಂದ ಪ್ರೇಕ್ಷಕರನ್ನು ರಂಜಿಸುವ ಕಲೆಗಾರ.
ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ "ಪ್ರೀತಿಯ ಹೃತಿಕ್ ರೋಷನ್, ನೀವು ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯದಿಂದ ತುಂಬಿದ ದಿನಗಳನ್ನು ಅನುಭವಿಸಬೇಕು" ಎಂದು ಹಾರೈಸಿದ್ದಾರೆ.
ಇನ್ನು, ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಸಹ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. "ಹೃತಿಕ್ ಹುಟ್ಟುಹಬ್ಬದ ಶುಭಾಶಯಗಳು. ಈ ವರ್ಷ ನಿಮಗೆ ಸಾಕಷ್ಟು ಯಶಸ್ಸು ಮತ್ತು ಸಂತೋಷ ಕರುಣಿಸಲಿ. ನಿಮ್ಮ ಅಸಾಧಾರಣ ಶಕ್ತಿ ಮತ್ತು ಪ್ರತಿಭೆಯಿಂದ ನೀವು ಪ್ರಕಾಶಮಾನವಾಗಿ ಬೆಳಗಲಿ" ಎಂದಿದ್ದಾರೆ.
ಇದನ್ನು ಓದಿ: ಮತ್ತೊಂದು ಹೊಸ ದಾಖಲೆ ಬರೆಯಲು ಸಜ್ಜಾದ 'ಕೆಜಿಎಫ್ 2'
ವಾಣಿ ಕಪೂರ್ ಇನ್‌ಸ್ಟಾಗ್ರಾಂ ಮೂಲಕ ಶುಭಾಶಯ ಕೋರಿದ್ದು, "ಈ ಬಹುಕಾಂತೀಯ ಜೀವಿಗೆ ಜನ್ಮದಿನದ ಶುಭಾಶಯಗಳು" ಎಂದು ಹೇಳಿದ್ದಾರೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಹಳೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. "ನಿಮಗೆ ಜನ್ಮದಿನ ಶುಭಾಶಯಗಳು ಸರ್" ಎಂದು ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ "ನಿಮಗೆ ಎಲ್ಲದಕ್ಕಿಂತ ಉತ್ತಮವಾದುದೇ ಲಭಿಸಲಿ. ಇಂದು ಮತ್ತು ಯಾವಾಗಲೂ!" ಎಂದು ಹೇಳಿ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ. ಇವರಷ್ಟೇ ಅಲ್ಲ, ಜಾಕ್ವೆಲಿನ್ ಫರ್ನಾಂಡೀಸ್, ವರುಣ್ ಧವನ್, ಸೋನಾಕ್ಷಿ ಸಿನ್ಹಾ, ಸಿದ್ದಾರ್ಥ್ ಮಲ್ಹೋತ್ರಾ, ರಿತೀಶ್ ದೇಶ್ಮುಖ್, ದಿಯಾ ಮಿರ್ಜಾ ಸೇರಿದಂತೆ ಅನೇಕ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು, ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ 'ಕಾಬಿಲ್' ನಟನ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.