ಹೈದರಾಬಾದ್ : ಸೂಪರ್‌ಸ್ಟಾರ್, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇಂದು ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನದಡಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಭಾಗವಹಿಸಿದರು.
ತೆಲಂಗಾಣ ಮತ್ತು ದೇಶಾದ್ಯಂತ ಹಸಿರು ಹೊದಿಕೆ ವಿಸ್ತರಿಸುವ ಗ್ರೀನ್ ಇಂಡಿಯಾ ಚಾಲೆಂಜ್ ಮತ್ತು ಅದರ ಸಂಸ್ಥಾಪಕ ಹಾಗೂ ರಾಜ್ಯಸಭಾ ಸಂಸದ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರ ಪ್ರಯತ್ನವನ್ನು ಅಮಿತಾಬ್ ಶ್ಲಾಘಿಸಿದರು.
ಗಿಡ ನೆಟ್ಟ ಬಳಿಕದ ಫಲಿತಾಂಶಗಳ ಕುರಿತು ಸಂತೋಷ ವ್ಯಕ್ತಪಡಿಸಿದ ಅಮಿತಾಬ್ ಬಚ್ಚನ್, ಈ ಕ್ರಮಕೈಗೊಳ್ಳಲು ಸಂತೋಷ್ ಕುಮಾರ್ಗೆ ಹೇಗೆ ಪ್ರೇರಣೆ ದೊರಕಿತು, ಸಸ್ಯಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬುದರ ಕುರಿತು ವಿಚಾರಿಸಿದರು.
ತೆಲಂಗಾಣದ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ ಟಿ ರಾಮರಾವ್ ಅವರ ಜನ್ಮದಿನದಂದು ಜಿಐಸಿ ಇತ್ತೀಚೆಗೆ ಮೂರು ಕೋಟಿ ಸಸಿಗಳನ್ನು ನೆಟ್ಟಿದೆ ಎಂದು ತಿಳಿದು ಆಶ್ಚರ್ಯವಾಯಿತು ಎಂದು ಅವರು ಹೇಳಿದರು.
"ಇದು ನಿಸ್ಸಂಶಯವಾಗಿ ಮಹತ್ತರವಾದ ಕಾರ್ಯ ಮತ್ತು ಪರಿಸರದ ಬಗೆಗಿನ ಅವರ ಸಮರ್ಪಣೆ ಮತ್ತು ಬದ್ಧತೆಯ ಬಗ್ಗೆ ನನಗೆ ಅಚ್ಚರಿಯಾಗುತ್ತಿದೆ" ಎಂದು ಬಿಗ್ ಬಿ ಹೇಳಿದರು.
ಒಂದು ಗಂಟೆಯೊಳಗೆ 2 ಕೋಟಿ ಸೀಡ್ ಬಾಲ್(ಬೀಜದ ಉಂಡೆ)ಗಳನ್ನು ಬೃಹತ್ ಪ್ರಮಾಣದಲ್ಲಿ ನೆಡುವುದರೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರವೇಶಿಸಿದ ಜಿಐಸಿಯನ್ನು ಅಮಿತಾಬ್ ಅಭಿನಂದಿಸಿದರು.
"ನಾನು ಗ್ರೀನ್ ಇಂಡಿಯಾ ಚಾಲೆಂಜ್ ಬಗ್ಗೆ ತಿಳಿದಿದ್ದೆ. ಆದರೆ, ಇದೀಗ ಇದರಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಈ ಮಹತ್ತರವಾದ ಕೆಲಸವನ್ನು ಮುಂದುವರಿಸುತ್ತಿರುವ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರಿಗೆ ನಾನು ಶುಭ ಹಾರೈಸುತ್ತೇನೆ" ಎಂದು ಅವರು ಹೇಳಿದರು.
ಗ್ರೀನ್ ಇಂಡಿಯಾ ಚಾಲೆಂಜ್‌ನಂತಹ ಉದಾತ್ತ ಮತ್ತು ಶ್ರೇಷ್ಠ ಕ್ರಮಕ್ಕೆ ಪ್ರಪಂಚದಾದ್ಯಂತದ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯವಿದೆ ಎಂದು ಅಮಿತಾಬ್ ಬಚ್ಚನ್ ಅಭಿಪ್ರಾಯಪಟ್ಟರು ಮತ್ತು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಇನ್ನೂ ಮೂರು ಜನರಿಗೆ ಭಾಗವಹಿಸಲು ಚಾಲೆಂಜ್ ಹಾಕುತ್ತೇನೆ ಎಂದು ಹೇಳಿದರು.
ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ, ನಿರ್ಮಾಪಕ ಅಶ್ವಿನಿ ದತ್ ಮತ್ತು ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೀಶ್ವರಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಸಿ ನೆಟ್ಟರು.
ಸಂಸದ ಸಂತೋಷ್ ಅವರು ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಅಶ್ವಿನಿ ದತ್ ಅವರಿಗೆ ಗ್ರೀನ್ ಇಂಡಿಯಾ ಚಾಲೆಂಜ್ ಅಗತ್ಯವನ್ನು ವಿವರಿಸುವ "ವೃಕ್ಷ ವೇದಂ" ಎಂಬ ಹೆಸರಿನ ಪುಸ್ತಕ ನೀಡಿದರು.
ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಸೋನು ಸೂದ್ ಕೂಡ ಇತ್ತೀಚೆಗೆ ಈ ಅಭಿಯಾನದ ಭಾಗವಾಗಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಟ್ಟಿದ್ದರು.