ಬಾಲಿವುಡ್ ನಟಿ ಶಿಖಾ ಮಲ್ಹೋತ್ರಾ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದು, ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾರುಖ್ ಖಾನ್ ಅಭಿನಯದ 'ಫ್ಯಾನ್' ಚಿತ್ರದಲ್ಲಿ ನಟಿಸಿದ್ದ ಶಿಖಾ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನಸೇವೆ ಮಾಡಿದ್ದರು.
ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ 2016 ರಲ್ಲಿ ಕೆಲಸ ಮಾಡುವುದರಿಂದ ಹಿಡಿದು, 2020 ರಲ್ಲಿ ಬಿಡುಗಡೆಯಾದ ಕಾಂಚ್ಲಿ: ಲೈಫ್ ಇನ್ ಎ ಸ್ಲಫ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವವರೆಗೆ, ಮಲ್ಹೋತ್ರಾ ಬಾಲಿವುಡ್ಗೆ ಕೊಡುಗೆ ನೀಡಿದ್ದಾರೆ.
ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕೆಲಸ ಮಾಡಿದರು. ಈ ಮೂಲಕ ಕೊರೊನಾ ಸೋಂಕಿತರಿಗೆ ಸೇವೆ ಸಲ್ಲಿಸಿ ಆಸರೆಯಾದರು. ಆದರೆ ಇದಾದ 7 ತಿಂಗಳ ಬಳಿಕ ಅಂದರೆ ಅಕ್ಟೋಬರ್‌ನಲ್ಲಿ, ಶಿಖಾ ಕೊರೊನಾ ವೈರಸ್ಗೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ತಕ್ಷಣವೇ ಅವರು ಪಾರ್ಶ್ವವಾಯುಗೆ ಒಳಗಾಗಿದ್ದರು. ಇದರಿಂದ ಆಕೆಯ ದೇಹದ ಬಲ ಭಾಗ ಸ್ವಾಧೀನ ಕಳೆದುಕೊಂಡಿದೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಶಿಖಾ, "ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ ಚೇತರಿಕೆ ಬಹಳ ನಿಧಾನವಾಗಿದ್ದು, ತಾನು ಯಾವಾಗ ಮೊದಲಿನಂತೆ ಎದ್ದು ಓಡಾಡುತ್ತೇನೆ ಎಂದು ಗೊತ್ತಾಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.