ಮುಂಬೈ (ಮಹಾರಾಷ್ಟ್ರ): ಖ್ಯಾತ ಗಾಯಕ ಸೋನು ನಿಗಮ್ ಮತ್ತು ಅವರ ಕುಟುಂಬಸ್ಥರಿಗೆ ಕೋವಿಡ್ ಸೋಂಕು ತಗುಲಿದೆ. ಕೋವಿಡ್ ದೃಢಪಟ್ಟಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯಕ, ನನಗೆ, ನನ್ನ ಪತ್ನಿ ಮತ್ತು ಪುತ್ರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ನಾವು ದುಬೈನಲ್ಲಿದ್ದೇವೆ. ಯಾವುದೇ ರೋಗ ಲಕ್ಷಣಗಳಿಲ್ಲ, ನಾವು ಆರೋಗ್ಯವಾಗಿದ್ದೇವೆ, ನಾವು ದುಬೈನಲ್ಲೇ ಹೋಮ್ ಕ್ವಾರಂಟೈನ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.
ಸೂಪರ್ ಸೀಸನ್-3 ನಿಮಿತ್ತ ಗಾಯಕ ಸೋನು ನಿಗಮ್ ಭಾರತಕ್ಕೆ ಬರಬೇಕಿತ್ತು. ಭುವನೇಶ್ವರದಲ್ಲಿ ಪ್ರದರ್ಶನ ನೀಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆ, ಭಾರತಕ್ಕೆ ಬರಲಾಗುತ್ತಿಲ್ಲ.
''ಹಲವು ಬಾರಿ ನಾನು ವೈರಲ್ ಜ್ವರದಿಂದ ಬಳಲುತ್ತಿರುವಾಗ, ಗಂಟಲು ಕೆಟ್ಟಿದ್ದಾಗ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಆದರೆ ಸದ್ಯದ ಪರಿಸ್ಥಿತಿ ಅದಕ್ಕಿಂತ ಉತ್ತಮವಾಗಿದೆ. ನಾನು ಸಕಾರಾತ್ಮಕವಾಗಿದ್ದೇನೆ, ನನ್ನ ಗಂಟಲು ಸಹ ಚೆನ್ನಾಗಿದೆ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಮುದ್ರ ತೀರದ ಹೊಸ ಮನೆಯಲ್ಲಿ ವಜ್ರ ಖಚಿತ ಮಾಂಗಲ್ಯ ಧರಿಸಿ ಫೋಟೋಗೆ ಪೋಸ್ ಕೊಟ್ಟ ವಿಕ್ಯಾಟ್!
ಕೋವಿಡ್ನಿಂದ ಸಾಕಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದು ಹೀಗೆಯೇ ಇರುವುದಿಲ್ಲ. ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇನ್ನೂ ಭುವನೇಶ್ವರದಲ್ಲಿ ಪ್ರದರ್ಶನ ನೀಡಲು ಮುಂದಾದ ಗಾಯಕ ಶಾನ್ ಮತ್ತು ಸಂಗೀತ ಸಂಯೋಜಕಿ ಅನು ಮಲಿಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.