ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಕಾರ್ಯಕ್ರಮವೊಂದಕ್ಕೆ ಆಗಮಿಸುವುದಾಗಿ ಹೇಳಿ, ಅದಕ್ಕಾಗಿ 37 ಲಕ್ಷ ರೂ. ಹಣ ಪಡೆದು ಸೋನಾಕ್ಷಿ ಮೋಸ ಮಾಡಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲವೂ ಊಹಾಪೋಹ. ನನಗೆ ಕಿರುಕುಳ ನೀಡುವುದಕ್ಕೆ ಆ ವ್ಯಕ್ತಿ ಮಾಡುತ್ತಿರುವ ದುಷ್ಟ ಕೆಲಸ ಇದು ಎಂದಿದ್ದಾರೆ.
ಕೇವಲ ವದಂತಿ: ಯಾರಿಂದಲೂ ಅಧಿಕೃತ ಮಾಹಿತಿ ಪಡೆಯದೇ, ನನ್ನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ ಎಂದು ವದಂತಿ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಮಾಧ್ಯಮಗಳು ಮತ್ತು ಪತ್ರಕರ್ತರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಆ ವ್ಯಕ್ತಿಯು ಪ್ರಚಾರ ಪಡೆಯುವುದಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ನಾನು ಇಷ್ಟು ವರ್ಷಗಳಿಂದ ಕಷ್ಟಪಟ್ಟು ಗಳಿಸಿರುವ ಗೌರವ ಹಾಳು ಮಾಡುವುದು, ದುಡ್ಡು ಕೀಳುವುದು ಮತ್ತು ಇದರಿಂದ ಆತ ಕೂಡ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾನೆ. ಹಾಗಾಗಿ, ಇದರಲ್ಲಿ ಯಾರೂ ಕೂಡ ಭಾಗಿಯಾಗಬೇಡಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವು ಮೊರಾದಾಬಾದ್ ಕೋರ್ಟ್‌ನಲ್ಲಿದೆ ಮತ್ತು ಅಲಹಾಬಾದ್ ಹೈಕೋರ್ಟ್ ಕೂಡ ಇದಕ್ಕೆ ತಡೆಯಾಜ್ಞೆ ನೀಡಿದೆ.
ನ್ಯಾಯಾಲಯ ನಿಂದನೆ ಮಾಡಿದ್ದಕ್ಕಾಗಿ ಅವರ ವಿರುದ್ಧ ನನ್ನ ವಕೀಲರ ತಂಡ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ಪ್ರಕರಣದ ಬಗ್ಗೆ ಮೊರಾದಾಬಾದ್ ಕೋರ್ಟ್ ತೀರ್ಪು ನೀಡುವವರೆಗೆ ಇದೇ ನನ್ನ ಏಕೈಕ ಹೇಳಿಕೆ ಆಗಿರುತ್ತದೆ. ಅಲ್ಲಿವರೆಗೂ ಯಾರೂ ನನ್ನನ್ನು ಸಂಪರ್ಕಿಸಬೇಡಿ. ನಾನು ಮನೆಯಲ್ಲಿದ್ದೇನೆ ಮತ್ತು ನನ್ನ ವಿರುದ್ಧ ಯಾವುದೇ ವಾರಂಟ್ ಹೊರಡಿಸಲಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಏನಿದು ಪ್ರಕರಣ?: ದೆಹಲಿ ಮೂಲದ ಪ್ರಮೋದ್ ಶರ್ಮಾ ಎಂಬುವವರು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಸೋನಾಕ್ಷಿ ಸಿನ್ಹಾಗೆ ಕೇಳಿಕೊಂಡಿದ್ದರು. ಅದಕ್ಕಾಗಿ ಅವರು ಬರೋಬ್ಬರಿ 37 ಲಕ್ಷ ರೂ.ಗಳನ್ನು ಸೋನಾಕ್ಷಿಗೆ ನೀಡಿದ್ದರಂತೆ. ಆದರೆ, ಹಣವನ್ನು ಪಡೆದ ಬಳಿಕ ಸೋನಾಕ್ಷಿ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ.
ಅಲ್ಲದೇ ಕಾರ್ಯಕ್ರಮಕ್ಕೂ ಬರಲಿಲ್ಲ. ಈಗ ಹಣ ವಾಪಸ್ ಕೇಳಿದರೆ ನೀಡುತ್ತಿಲ್ಲ ಎಂದು ಪ್ರಮೋದ್ ಆರೋಪ ಮಾಡಿದ್ದಾರೆ. ಕೊನೆಗೆ ಸೋನಾಕ್ಷಿಯನ್ನು ಸಂಪರ್ಕ ಮಾಡಿದರೂ, ಪ್ರಮೋದ್‌ಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆ ಸಂಬಂಧ ಪ್ರಕರಣ ದಾಖಲಾಗಿ, ಸೋನಾಕ್ಷಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ ಎಂಬ ಸುದ್ದಿ ಹಬ್ಬಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಮದುವೆ ಫೋಟೋ ವದಂತಿ.. ನಟಿ ಸೋನಾಕ್ಷಿ ಹೇಳಿದ್ದು ಹೀಗೆ..