ಮುಂಬೈ: ಮೊನ್ನೆಯಷ್ಟೇ ನಟಿ, ಕಾಂಗ್ರೆಸ್ ಸದಸ್ಯೆ ನಗ್ಮಾ, ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಇದೀಗ ಡ್ರಗ್ಸ್ನತ್ತ ತಿರುಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅವರು ಹೇಳಿದಂತೆ ಇದೀಗ ಬಾಲಿವುಡ್ನಾದ್ಯಂತ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ನಡುವೆ ಬಾಲಿವುಡ್ನಲ್ಲಿ ಶೇ.99 ರಷ್ಟು ಕಲಾವಿದರು ಡ್ರಗ್ಸ್ಗೆ ದಾಸರಾಗಿದ್ದಾರೆ ಎಂಬ ಕಂಗನಾ ರಣಾವತ್ ಹೇಳಿಕೆ ಶುದ್ಧ ಸುಳ್ಳು ಎಂದು ನಟಿ ಶ್ವೇತಾ ತ್ರಿಪಾಠಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಬಾಲಿವುಡ್ನಲ್ಲಿ ಅವಕಾಶ ಪಡೆಯಲು ನಿರ್ದೇಶಕ ಅಥವಾ ಸಂಬಂಧಿಸಿದವರೊಂದಿಗೆ ಒಂದು ದಿನ ಕಳೆಯಬೇಕು ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಆದರೆ ಬಾಲಿವುಡ್ನಲ್ಲಿ ಇಂತ ಚಟುವಟಿಕೆಗಳು ಇಲ್ಲ, ಇಲ್ಲಿ ಯಾರೂ ಮಾದಕ ವಸ್ತುಗಳನ್ನು ಬಲವಂತವಾಗಿ ಬಂದು ಬಾಯಿಗೆ ಸುರಿಯುವುದಿಲ್ಲ. ಡ್ರಗ್ಸ್ ಬೇಕೇ ಬೇಕು ಎನ್ನುವವರು, ಅದಕ್ಕೆ ಅಡಿಕ್ಟ್ ಆದವರು ಹೇಗಾದರೂ ಸರಿ ಡ್ರಗ್ಸ್ ಪಡೆದೇ ತೀರುತ್ತಾರೆ. ಅವರು ಮುಂಬೈನಂತ ದೊಡ್ಡ ನಗರದಲ್ಲಿರಲಿ, ಅಥವಾ ಸಣ್ಣ ಹಳ್ಳಿಯಲ್ಲಿರಲಿ, ಹೇಗಾದರೂ ಪಡೆದುಕೊಳ್ಳುತ್ತಾರೆ. ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳಬೇಕಿರುವುದು ಪೋಷಕರ ಕರ್ತವ್ಯ. ಜೊತೆಗೆ ಅವರ ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಿ ಎಂದು ನಾನು ಕೇಳಿಕೊಳ್ಳುತ್ತೇನೆ.
ಕೆಲಸ ಹುಡುಕಿಕೊಂಡು ಬೇರೆ ಸ್ಥಳಗಳಿಗೆ ಹೋದಾಗ ನೀನು ಎಷ್ಟು ಸಂಪಾದನೆ ಮಾಡುತ್ತಿದ್ದೀಯ ಎಂದು ಕೇಳಿದರೆ ಅದರಿಂದ ಖಂಡಿತ ಮಾನಸಿಕ ಒತ್ತಡ ಉಂಟಾಗುತ್ತದೆ. ಅದರ ಬದಲು ಹೇಗಿದ್ದೀಯ..ಸಮಸ್ಯೆಗಳೇನಾದರೂ ಇವೆಯಾ ಎಂದು ಕೇಳಬೇಕು. ನಮ್ಮ ತಪ್ಪಿಗೆ ನಾವು ಎಂದಿಗೂ ಇನ್ನೊಬ್ಬರನ್ನು ದೂಷಿಸಬಾರದು ಎಂದು ಶ್ವೇತಾ ತ್ರಿಪಾಠಿ ಹೇಳಿದ್ದಾರೆ.
ಬಾಲಿವುಡ್ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರ ವಿರುದ್ಧ ಹಿರಿಯ ನಟಿ ಜಯಾಬಚ್ಚನ್, ಹೇಮ ಮಾಲಿನಿ, ವಿದ್ಯಾ ಬಾಲನ್, ಊರ್ಮಿಳಾ ಮಾತೊಂಡ್ಕರ್, ತಾಪ್ಸಿ ಪನ್ನು, ಗಾಯಕಿ ಸೋನು ಮೊಹಪಾತ್ರ ಸೇರಿದಂತೆ ಅನೇಕ ನಟಿಮಣಿಯರು ಧ್ವನಿಯೆತ್ತಿದ್ದಾರೆ.