ಬೆಂಗಳೂರು : ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ವಂಚನೆಗಳಾದರೆ ಅದು ಹೆಚ್ಚಾಗಿ ನಿರ್ಮಾಪಕನಿಗೆ ಸಂಬಂಧಿಸಿರುತ್ತದೆ. ನಿರ್ಮಾಪಕ ಮೋಸ ಹೋಗಿರುವುದು ಅಥವಾ ನಿರ್ಮಾಪಕನೇ ಮೋಸ ಮಾಡಿರುವ ಪ್ರಕರಣಗಳು ಇರುತ್ತವೆ. ಆದರೆ, ಈ ಪ್ರಕರಣದಲ್ಲಿ ನಿರ್ದೇಶಕರೊಬ್ಬರು ನಿರ್ಮಾಪಕರಿಗೆ ಸಿನಿಮಾದ ದೃಶ್ಯದ ತುಣುಕುಗಳನ್ನ ನೀಡದೆ ಸತಾಯಿಸುತ್ತಿದ್ದಾರೆ.
ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಅವರು ತಮ್ಮ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಶಾರ್ದೂಲ ಸಿನಿಮಾ ಭೈರವ ಸಿನಿಮಾಸ್ ಪ್ರೊಡಕ್ಷನ್ನಲ್ಲಿ ತೆರೆಗೆ ಸಿದ್ಧವಾಗಿದೆ. ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಶಾರ್ದೂಲ ಚಿತ್ರವನ್ನ ನಿರ್ದೇಶಿಸಿದ್ದಾರೆ.
ಸದ್ಯ ಈ ಚಿತ್ರದ ಆಡಿಯೋ ಲಾಂಚ್ ಆಗಿದೆ. ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಸಿನಿಮಾದ ತುಣುಕುಗಳನ್ನ ನಿರ್ದೇಶಕ ಕೌಶಿಕ್ ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿದ್ದಾರೆ. ಸಿನಿಮಾ ಪ್ರಮೋಷನ್‌ಗೆ ಬೇಕಾದ ಚಿತ್ರೀಕರಣದ ಮೇಕಿಂಗ್ ವಿಡಿಯೋಗಳನ್ನ ನೀಡುತ್ತಿಲ್ಲ ಎಂದು ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.
ಹಾರರ್ ಚಿತ್ರವಾಗಿರುವ ಶಾರ್ದೂಲ ಚಿತ್ರದಲ್ಲಿ ರಾಜಧಾನಿ ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯಿಸಿದ್ದಾರೆ. ಈ ಚಿತ್ರವನ್ನ 2018ರಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣದ ಪ್ರಾರಂಭದ ಸಮಯಕ್ಕಿಂತ ಹೆಚ್ಚು ಹಣವನ್ನ ನಿರ್ದೇಶಕ ಅರವಿಂದ್ ಕೌಶಿಕ್ ಪಡೆದಿದ್ದಾರೆ.
2020ರಲ್ಲಿ ಅನ್‌ಲಾಕ್ ಆದ ಬಳಿಕ ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧವಾಗಿತ್ತು. ಈ ಸಮಯದಲ್ಲಿ ನಿರ್ದೇಶಕ ಅರವಿಂದ ಕೌಶಿಕ್, ನಿರ್ಮಾಪಕರಿಂದ ಒಂದೂವರೆ ಲಕ್ಷ ಪಡೆದಿದ್ದಾರೆ. ಇದಲ್ಲದೇ ಚಿತ್ರದ ಪ್ರಮೋಷನ್‌ಗಾಗಿ ಚಿತ್ರದ ತುಣುಕುಗಳನ್ನ ಕೊಡದೆ, ನಿರ್ಮಾಪಕನಿಂದ ಯಾವುದೇ ಹಣ ಪಡೆದಿಲ್ಲ ಎಂದು ಎಲ್ಲೆಡೆ ಹೇಳುತ್ತಿದ್ದಾರೆ ಎಂದು ನಿರ್ಮಾಪಕ ರೋಹಿತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೌಶಿಕ್ ನಿರ್ದೇಶನದ ಶಾರ್ದೂಲ ಚಿತ್ರದ ಟೀಸರ್ ಬಿಡುಗಡೆ