ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಲಾಕ್ಡೌನ್ ಆರಂಭವಾದಾಗಿನಿಂದ ಮುಂಬೈನ ತಮ್ಮ ಪನ್ವೆಲ್ ತೋಟದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅವರು ಫಾರ್ಮ್ಹೌಸ್ನಲ್ಲಿ ಕಾಲ ಕಳೆಯುತ್ತಿರುವ ಕೆಲವೊಂದು ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡಾ ಮಾಡಿದ್ದಾರೆ.
ಈ ನಡುವೆ ತಮ್ಮ ತೋಟದ ಮನೆಯಲ್ಲಿ ಚಿತ್ರೀಕರಣವಾಗಿದ್ದ ಮೂರು ಹಾಡುಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಸಲ್ಲು ಮನರಂಜನೆ ನೀಡಿದ್ದರು. ಇದೀಗ ಅವರ ಫಾರ್ಮ್ಹೌಸ್ನಲ್ಲಿ ಕಿರುಚಿತ್ರವೊಂದನ್ನು ಮಾಡಲು ಸಲ್ಮಾನ್ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಜೊತೆ ವಲುಶಾ ಡಿ ಸೋಜ ಕೈ ಜೋಡಿಸಲಿದ್ದಾರಂತೆ. ಆದರೆ ಈ ಬಗ್ಗೆ ಸಲ್ಲು ಭಾಯ್ ಅಧಿಕೃತವಾಗಿ ಹೇಳಿಕೊಂಡಿಲ್ಲ. ತಮ್ಮ ಫಾರ್ಮ್ಹೌಸ್ನಲ್ಲಿ ತೆಗೆದ ತೇರೆ ಬಿನಾ, ಭಾಯ್ ಭಾಯ್, ಪ್ಯಾರ್ ಕರೋನಾ ಹಾಡುಗಳನ್ನು ಸಲ್ಮಾನ್ ಖಾನ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಹಾಡುಗಳ ಬಗ್ಗೆ ಮಾತಾಡಿದ ಸಲ್ಮಾನ್ ಖಾನ್ 7 ವಾರಗಳ ಹಿಂದೆ ನಾನು ಇಲ್ಲಿಗೆ ಬಂದಾಗ ಲಾಕ್ಡೌನ್ ದಿನಗಳನ್ನು ಇದೇ ಜಾಗದಲ್ಲಿ ಕಳೆಯುತ್ತೇನೆ ಎಂದುಕೊಂಡಿರಲಿಲ್ಲ. ಇಲ್ಲಿ ಸುಮ್ಮನೆ ಕೂರುವ ಬದಲಿಗೆ ಯಾವುದಾದರೂ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕಿತ್ತು. ಆದ್ದರಿಂದ ನಾವು ಈ ಹಾಡುಗಳನ್ನು ಮಾಡಲು ನಿರ್ಧರಿಸಿದೆವು. 'ತೇರೆ ಬಿನಾ' ಕೆಲವೇ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. 24 ಗಂಟೆ ಅವಧಿಯಲ್ಲಿ 12 ಮಿಲಿಯನ್ ಜನರು ಹಾಡನ್ನು ನೋಡಿದ್ದರು. ಒಂದು ವಾರದಲ್ಲಿ ವ್ಯೂವರ್ಗಳ ಸಂಖ್ಯೆ 26 ಮಿಲಿಯನ್ ಗಡಿ ದಾಟಿದೆ ಎಂದು ಹೇಳಿದ್ದಾರೆ.
ಈ ಹಾಡನ್ನು ಸ್ವತ: ಸಲ್ಮಾನ್ ಖಾನ್ ಹಾಡಿದ್ದು ಅವರೇ ನಿರ್ದೇಶಿಸಿದ್ದಾರೆ. ಸಲ್ಮಾನ್ ಸ್ನೇಹಿತರಾದ ಶಬ್ಬೀರ್ ಅಹ್ಮದ್ ಹಾಡಿಗೆ ಸಾಹಿತ್ಯ ಬರೆದಿದ್ದರೆ ಅಜಯ್ ಭಾಟಿಯಾ ಸಂಗೀತ ಬರೆದಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ.