ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಅಶೋಕ್ ಪಾಂಡೆ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಜೆಕೆ 24x7 ಸುದ್ದಿ ವಾಹಿನಿಯ ಪತ್ರಕರ್ತ ಪಾಂಡೆ ಹಾಗೂ ಆತನ ಸ್ನೇಹಿತನ ಮೇಲೆ ಸಲ್ಮಾನ್ ಖಾನ್ ಹಾಗೂ ಆತನ ಅಂಗರಕ್ಷಕರು ಹಲ್ಲೆ ನಡೆಸಿದ್ದಾರಂತೆ. ಏಪ್ರಿಲ್ 24 ರಂದು ಈ ಘಟನೆ ನಡೆದಿದೆ. ಸೈಕಲ್ನಲ್ಲಿ ಬರುತ್ತಿದ್ದ ಸಲ್ಮಾನ್ ಖಾನ್ ಅವರ ವಿಡಿಯೋ ಮಾಡಿಕೊಳ್ಳಲು ಈ ಪತ್ರಕರ್ತ ಮುಂದಾಗಿದ್ದ. ಈ ವೇಳೆ ಕೋಪಗೊಂಡ ಸಲ್ಲು ಹಾಗೂ ಅವರ ಬಾಡಿಗಾರ್ಡ್ಸ್ ನಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿದ್ದಾರೆ.
ಘಟನೆ ನಡೆದ ದಿನದಂದೇ ಈ ಸಂಬಂಧ ಪಾಂಡೆ ಪೊಲೀಸರಿಗೆ ದೂರು ನೀಡಿಲು ಮುಂದಾಗಿದ್ದರು. ಆದರೆ, ಸಲ್ಮಾನ್ ಖಾನ್ ಯಾವುದೇ ಅಪರಾಧ ಮಾಡಿಲ್ಲ ಎಂದಿದ್ದ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದಿದ್ದರು. ಆದ್ದರಿಂದ ಸದ್ಯ ಅಶೋಕ ಪಾಂಡೆ ನ್ಯಾಯಾಲಯದ ಮೊರೆ ಹೋಗಿದ್ದು, ಐಪಿಸಿ ಸೆಕ್ಷನ್ 323 ,392 ಮತ್ತು 506 ನಡಿ ಮುಂಬೈನ ಅಂದೇರಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬಳಿ ಖಾಸಗಿ ದೂರು ದಾಖಲಿಸಿದ್ದಾರೆ. ಜುಲೈ 12 ರಂದು ಈ ದೂರಿನ ವಿಚಾರಣೆ ನಡೆಯಲಿದೆ ಎಂದು ಪತ್ರಕರ್ತನ ಪರ ವಕೀಲ ನೀರಜ್ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.