ಕಳೆದ ವರ್ಷ ಬಾಲಿವುಡ್ನ ಪ್ರೇಮಿಗಳೆಲ್ಲ ಮದುವೆಯಾಗಿ ಸೆಟ್ಲಾದ್ರು. ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ-ನಿಕ್ ಸೇರಿದಂತೆ ಕೆಲ ಸೆಲಬ್ರಿಟಿ ಜೋಡಿಗಳು ತಮ್ಮ ಪ್ರೀತಿಯನ್ನು ಮದುವೆ ಹಂತಕ್ಕೆ ತೆಗೆದುಕೊಂಡು ಹೋದ್ರು.
2019 ಕೂಡ ಬಿಟೌನ್ ಪ್ರಣಯ ಪಕ್ಷಿಗಳಿಗೆ ಮದುವೆಯ ಆಮಂತ್ರಣ ನೀಡುತ್ತಿದೆ. ಈಗಾಗಲೇ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಾಗಿದೆ. ಇನ್ನಷ್ಟೇ ಈ ಲವ್ಬರ್ಡ್ಸ್ ಸಪ್ತಪದಿ ತುಳಿಯಲಿದ್ದಾರೆ.
ಇತ್ತ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕೂಡ ಹಸೆಮಣೆ ಏರುವ ರೇಸ್ನಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕೈ ಕೈ ಹಿಡಿದು ಡಿನ್ನರ್ ಪಾರ್ಟಿ, ನೈಟ್ ಔಟ್, ವಿದೇಶ ಸುತ್ತುತ್ತಿರುವ ಈ ಜೋಡಿ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ರೂಮರ್ ದಟ್ಟವಾಗಿಯೇ ಹರಿದಾಡುತ್ತಿದೆ. ಇದೇ ತಿಂಗಳು 18 ಹಾಗೂ 22 ರಂದು ಗೋವಾದಲ್ಲಿ ಈ ಜೋಡಿಯ ಮದುವೆ ನಡೆಯಲಿದ ಎನ್ನುವ ಸುದ್ದಿ ಕೂಡ ಕೇಳಿ ಬಂದಿದೆ.
ಆದರೆ, ಈ ಎಲ್ಲ ಅಂತೆ-ಕಂತೆಗಳಿಗೆ ಮಲೈಕಾ ಅಂಕುಶ ಹಾಕುವ ಪ್ರಯತ್ನ ಮಾಡಿದ್ದಾರೆ. ಬಾಂಬೆ ಟೈಮ್ಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಮಲೈಕಾ ಈ ಸಿಲ್ಲಿ ರೂಮರ್ಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.