ಮುಂಬೈ: ಬಾಲಿವುಡ್ ನಟಿ ಮಾನ್ವಿ ಗಾಗ್ರೂ ವೆಬ್ ಸರಣಿ ತಯಾರಕರೊಬ್ಬರಿಂದ ತಾನು ಅನುಭವಿಸಬೇಕಾಗಿ ಬಂದಿದ್ದ ಕಾಸ್ಟಿಂಗ್ ಕೌಚ್ ನ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ.
ವರದಿಯ ಪ್ರಕಾರ ಸುಮಾರು ಒಂದು ವರ್ಷದ ಹಿಂದೆ ಈ ಘಟನೆ ನಡೆದಿದೆ. ನಿರ್ಮಾಪಕರೊಬ್ಬರು ಕರೆ ಮಾಡಿ ಮುಂಬರುವ ನಮ್ಮ ವೆಬ್ ಸರಣಿಯಲ್ಲಿ ನಟಿಸುತ್ತೀರಾ ಎಂದು ಮಾತು ಆರಂಭಿಸಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಮಾನ್ವಿ ತಿಳಿಸಿದ್ದಾರೆ.
"ಒಂದು ವರ್ಷದ ಹಿಂದೆ, ಯಾವುದೊ ಅನಾಮಧೇಯ ಸಂಖ್ಯೆಯಿಂದ ನನಗೆ ಕರೆ ಬಂತು. ಅವರು 'ನಾವು ವೆಬ್ ಸರಣಿಯನ್ನು ಮಾಡುತ್ತಿದ್ದೇವೆ ಅದರಲ್ಲಿ ನಿಮ್ಮನ್ನು ನಟಿಸಲು ಕೇಳಿಕೊಳ್ಳುತ್ತಿದ್ದೇವೆ' ಎಂದರು. ಜೊತೆಗೆ ನನಗೆ ಬಜೆಟ್ ಹೇಳಿದರು ಆಗ ನಾನು, 'ಇಲ್ಲ ಇದು ತುಂಬಾ ಕಡಿಮೆ ಆಯ್ತು' ಎಂದೆ ಜೊತೆಗೆ 'ನಾವು ಬಜೆಟ್ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ? ಮೊದಲು ಸ್ಕ್ರಿಪ್ಟ್ ಹೇಳಿ. ನನಗೆ ಆಸಕ್ತಿ ಇದ್ದರೆ ಹಣ, ದಿನಾಂಕಗಳು ಇವೆಲ್ಲದರ ಬಗ್ಗೆ ಚರ್ಚಿಸೋಣ' ಎಂದೆ. ಆಗ ಅವರು 'ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಬಹುದು ಆದರೆ, ನೀವು ರಾಜಿ ಮಾಡಿಕೊಳ್ಳಬೇಕಾಗುತ್ತದೆ' ಎಂದರು ಎಂದು ಮಾನ್ವಿ ಹೇಳಿಕೊಂಡಿದ್ದಾರೆ.
ಆಗ ನಟಿ ತಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಆತನನ್ನು ನಿಂದಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇಂತ ಮೀಟೂ ಕಾಲದಲ್ಲೂ ಇನ್ನೂ ಇಂತ ಘಟನೆಗಳು ನಡೆಯುತ್ತವೆ ಎಂದರೆ ನಿಜಕ್ಕೂ ಆಶ್ಚರ್ಯಕರ ಎಂದು ನಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾನ್ವಿ, ಜನಪ್ರಿಯ ಅಮೆಜಾನ್ ಪ್ರೈಮ್ ವೆಬ್ ಸರಣಿ ಫೋರ್ ಮೋರ್ ಶಾಟ್ಸ್ ಪ್ಲೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಶುಭ್ ಮಂಗಲ್ ಜ್ಯಾದಾ ಸವ್ಧಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಕಳೆದ ವರ್ಷ ಅವರು ಉಜ್ಡಾ ಚಮನ್ ಚಿತ್ರದಲ್ಲಿ ನಟಿಸಿದ್ದರು.