ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಇಂದು ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಪರಿಶ್ರಮದಿಂದಾಗಿ ಒಂದು ಬ್ರಾಂಡ್ ಆಗಿ ಹೊರಹೊಮ್ಮಿದ್ದಾರೆ. ಬಹುಮುಖಿ ಪ್ರತಿಭೆ ದೀಪಿಕಾ ಚಿತ್ರ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಮಾನಸಿಕ ಆರೋಗ್ಯದ ಕುರಿತು ಆಗಾಗ ಮಾತನಾಡುತ್ತಿರುವ ಡೀಪಿ, ತನ್ನ 14 ವರ್ಷಗಳ ಸುದೀರ್ಘ ಸಿನಿಮಾ ಪ್ರಯಾಣದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ.
ದೀಪಿಕಾ ಜೂನ್ 2015ರಿಂದ ಲಿವ್ ಲವ್ ಲಾಫ್ ಫೌಂಡೇಶನ್ ನಡೆಸುತ್ತಿದ್ದಾರೆ. ಈ ಪ್ರತಿಷ್ಠಾನದ ಕಾರ್ಯಕ್ರಮಗಳು ರಾಷ್ಟ್ರವ್ಯಾಪಿ ಸಾರ್ವಜನಿಕ ಜಾಗೃತಿ ಮತ್ತು ಅಪನಗದೀಕರಣ ಅಭಿಯಾನಗಳು, ಹದಿಹರೆಯದವರ ಮಾನಸಿಕ ಆರೋಗ್ಯ ಕಾರ್ಯಕ್ರಮಗಳು, ಗ್ರಾಮೀಣ ಸಮುದಾಯಗಳಲ್ಲಿ ಚಿಕಿತ್ಸೆಗೆ ಧನಸಹಾಯ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.
ಖಿನ್ನತೆಯೊಂದಿಗೆ ಹೋರಾಡಿದ ಈ ನಟಿ, ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು 2016ರಲ್ಲಿ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯೊಂದಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕೈಜೋಡಿಸಿದರು.
2019ರಲ್ಲಿ ತನ್ನ ಜನ್ಮದಿನದಂದು ದೀಪಿಕಾ ತನ್ನದೇ ಅಧಿಕೃತ ವೆಬ್‌ಸೈಟ್ ಪ್ರಾರಂಭಿಸಿದ್ದರು. ಅದು ದೀಪಿಕಾ ಸಾಧಿಸಿದ ಹೆಗ್ಗುರುತುಗಳು ಮತ್ತು ಪ್ರಶಸ್ತಿಗಳನ್ನು ಒಳಗೊಂಡಿದೆ.
ಈ ವೆಬ್‌ಸೈಟ್ ಲಿವ್ ಲವ್ ಲಾಫ್‌ನ ಮಾಹಿತಿ ಹಾಗೂ ಮಾನಸಿಕ ಆರೋಗ್ಯದ ಜಾಗೃತಿ ಮೂಡಿಸುತ್ತದೆ. 2019ರಲ್ಲಿ ದೀಪಿಕಾ ಪಡುಕೋಣೆ ಮಾಮಿ ಉತ್ಸವದ ಹೊಸ ಅಧ್ಯಕ್ಷರಾಗಿ ನೇಮಕಗೊಂಡರು.
2020ರ ಜನವರಿಯಲ್ಲಿ ಮಾನಸಿಕ ಆರೋಗ್ಯ ಜಾಗೃತಿಗೆ ನೀಡಿದ ಕೊಡುಗೆಗಾಗಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಪ್ರಶಸ್ತಿ ದೀಪಿಕಾಗೆ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸುವಾಗ, ದೀಪಿಕಾ ಮಾನಸಿಕ ಅಸ್ವಸ್ಥತೆಯೊಂದಿಗಿನ ತನ್ನ ಸ್ವಂತ ಅನುಭವದ ಕುರಿತು ತಿಳಿಸಿ, ದಿ ಲಿವ್ ಲವ್ ಲಾಫ್ ಫೌಂಡೇಶನ್ ಪ್ರಾರಂಭಿಸಲು ಅದು ಹೇಗೆ ಪ್ರೇರೇಪಿಸಿತು ಎಂದು ಹಂಚಿಕೊಂಡಿದ್ದರು.