ನವದೆಹಲಿ: 2021ರ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಮತ್ತು ಅಕ್ಷಯ್ ಕುಮಾರ್ಗೆ ಕ್ರಮವಾಗಿ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳು ಒಲಿದಿವೆ.
'ಲಕ್ಷ್ಮೀ' ಚಿತ್ರದಲ್ಲಿ ನಟನೆಗಾಗಿ ಅಕ್ಷಯ್ ಕುಮಾರ್ಗೆ ಅತ್ಯುತ್ತಮ ನಟ, 'ಛಪಾಕ್' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ. ವೆಬ್ ಸಿರೀಸ್ ವಿಭಾಗದಲ್ಲಿ ಸುಶ್ಮಿತಾ ಸೇನ್ಗೆ ಅತ್ಯುತ್ತಮ ನಟಿ, ಕಿಯಾರಾ ಅಡ್ವಾಣಿಗೆ 'ವಿಮರ್ಶಕರ ಅತ್ಯುತ್ತಮ ನಟಿ' ಪ್ರಶಸ್ತಿ ಬಂದಿದೆ.
ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದೀಪಿಕಾ ಪಡುಕೋಣೆಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಡಿಪಿಐಎಫ್ಎಫ್ ತಂಡವು ನಿಮಗೆ ಶುಭ ಹಾರೈಸುತ್ತದೆ ಎಂದು ಟ್ವಿಟರ್ನಲ್ಲಿ ಹೇಳಲಾಗಿದೆ. ಇದೇ ರೀತಿ ಅಕ್ಷಯ್ ಕುಮಾರ್ಗೆ ಕೂಡಾ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ಗೆ ಕೂಡಾ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಮರ್ಶಕರ ಉತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಕೊನೆಯದಾಗಿ ದಿಲ್ ಬೆಚಾರಾ ಚಿತ್ರದಲ್ಲಿ ಅಭಿನಯಿಸಿದ್ದ ಸುಶಾಂತ್ಗೆ ಪ್ರಶಸ್ತಿ ಘೋಷಣೆ ಮಾಡಿರುವ ಡಿಪಿಐಎಫ್ಎಫ್ ವಿ ಮಿಸ್ ಯೂ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದೆ.