ಹೈದರಾಬಾದ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣ ಭಾಟಿಯಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಕುಟುಂಬದ ಕೋರಿಕೆಯ ಮೇರೆಗೆ ಅವರ ಚಿಕಿತ್ಸೆಯ ಬಗ್ಗೆ ವಿವರ ನೀಡಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅರುಣ ಭಾಟಿಯಾ ಅವರ ಸ್ಥಿತಿ ಇಂದು ಸ್ವಲ್ಪ ಹದಗೆಟ್ಟಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಯುಕೆಯಲ್ಲಿ ತಮ್ಮ ಮುಂಬರುವ ಸಿನಿಮಾ ಸಿಂಡ್ರೆಲಾ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅಕ್ಷಯ್ ಕುಮಾರ್, ಚಿತ್ರೀಕರಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂದು ಬೆಳಗ್ಗೆ ಭಾರತಕ್ಕೆ ಹಿಂತಿರುಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸೈಕಲಾಜಿಕಲ್ ಥ್ರಿಲ್ಲಿಂಗ್ ಸಿನಿಮಾ ಆಗಿರುವ ಸಿಂಡ್ರೆಲಾ ಚಿತ್ರವನ್ನು ರಂಜಿತ್ ಎಂ.ತಿವಾರಿ ನಿರ್ದೇಶಿಸುತ್ತಿದ್ದು ಅಕ್ಷಯ್ ಕುಮಾರ್ ಅವಶ್ಯಕವಿರುವ ಸೀನ್ಗಳನ್ನು ಮುಗಿಸಿಕೊಂಡೇ ಬಂದಿದ್ದಾರೆ. ಸದ್ಯ ತಾಯಿಯ ಪಕ್ಕದಲ್ಲಿ ಕುಳಿತು ಅವರ ಆರೈಕೆಯಲ್ಲಿ ತೊಡಗಿದ್ದಾರೆ ಎಂದು ನಟನ ಸಂಬಂಧಿಕರು ತಿಳಿಸಿದ್ದಾರೆ. ಸಿಂಡ್ರೆಲಾ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ, ಬಚ್ಚನ್ ಪಾಂಡೆ, ಅತಿರಂಗೀ ರೇ, ಪೃಥ್ವಿರಾಜ್, ರಾಮ್ ಸೇತು, ರಕ್ಷಾ ಬಂಧನ್ ಸೇರಿದಂತೆ ಹಲವು ಸಿನಿಮಾಗಳನ್ನು ಅಕ್ಷಯ್ ಕುಮಾರ್ ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾ ಇಳಿಕೆಯ ಬಳಿಕ ಇತ್ತೀಚೆಗೆ ಅವರ ಬೆಲ್ ಬಾಟಮ್ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆಗೊಂಡಿದೆ.