ಹಲವು ದಿನಗಳಿಂದ ನಿಶ್ಯಬ್ಧವಾಗಿದ್ದ ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೆ ಉಸಿರೆತ್ತಿದ ಅದಾಶರ್ಮ - ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಅದಾಶರ್ಮ
'ಕಾಸ್ಟಿಂಗ್ ಕೌಚ್' ಎನ್ನುವುದು ದಕ್ಷಿಣ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್ ಚಿತ್ರರಂಗ ಮಾತ್ರವಲ್ಲ ವಿಶ್ವಾದ್ಯಂತ ಇದೆ. ಇದು ಎಲ್ಲೆಡೆ ಸಾಮಾನ್ಯವಾಗಿ ಹೋಗಿದೆ ಎಂದು ನಟಿ ಅದಾಶರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಾಕ್ಡೌನ್ ಆರಂಭದ ದಿನಗಳಲ್ಲಿ ಮನೆಯಲ್ಲಿ ಕಸ ಗುಡಿಸುತ್ತಿರುವ, ಮನೆ ಒರೆಸುತ್ತಿರುವ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಸುದ್ದಿಯಾಗಿದ್ದ ನಟಿ ಅದಾಶರ್ಮ ಕೆಲವು ದಿನಗಳಿಂದ ಮರೆಯಾಗಿದ್ದ ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೆ ಮಾತನಾಡಿದ್ದಾರೆ.
2 ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಈ ವೇಳೆ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ನಟಿಯರು ಕೂಡಾ ತಮಗೆ ಉಂಟಾಗಿದ್ದ ಕಹಿ ಅನುಭವಗಳನ್ನು ಬಹಿರಂಗಗೊಳಿಸಿದ್ದರು. ಕೆಲವರು ಕೋರ್ಟ್ ಮೆಟ್ಟಿಲು ಕೂಡಾ ಏರಿದ್ದರು.
ಇದೀಗ ಈ ಬಗ್ಗೆ ಮಾತನಾಡಿರುವ ಅದಾಶರ್ಮ, 'ಕಾಸ್ಟಿಂಗ್ ಕೌಚ್' ಎನ್ನುವುದು ದಕ್ಷಿಣ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್ ಚಿತ್ರರಂಗ ಮಾತ್ರವಲ್ಲ ವಿಶ್ವಾದ್ಯಂತ ಇದೆ. ಇದು ಎಲ್ಲೆಡೆ ಸಾಮಾನ್ಯವಾಗಿ ಹೋಗಿದೆ. ಕೋಣೆಯಲ್ಲಿ ಒಂದು ಮಂಚ ಇದೆ ಎಂದಾದಲ್ಲಿ ನಿಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ನೀವು ಅದರ ಮೇಲೆ ಕುಳಿತುಕೊಳ್ಳಬಹುದು, ಮಲಗಬಹುದು, ನಿಲ್ಲಬಹುದು, ಅಥವಾ ಯಾವುದೂ ಬೇಡವೆಂದರೆ ನೀವು ನೆಲದ ಮೇಲೆ ಕುಳಿತುಕೊಳ್ಳಬಹುದು' ಎಂದಿದ್ದಾರೆ.
ಅದಾಶರ್ಮ ಬಾಲಿವುಡ್, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ಧಾರೆ. ಕರಿಯರ್ ವಿಚಾರಕ್ಕೆ ಬರುವುದಾದರೆ ಅದಾಶರ್ಮಾರನ್ನು ಅಭಿಮಾನಿಗಳು ಕೊನೆಯ ಬಾರಿ ನೋಡಿದ್ದು 'ಬೈಪಾಸ್ ರೋಡ್' ಚಿತ್ರದಲ್ಲಿ. ಸದ್ಯಕ್ಕೆ ಅವರ ಕೈಯ್ಯಲ್ಲಿ 'ಮ್ಯಾನ್ ಟು ಮ್ಯಾನ್' ಎಂಬ ಸಿನಿಮಾ ಇದೆ. ಈ ಸಿನಿಮಾದಲ್ಲಿ ಹುಡುಗನಾಗಿ ಹುಟ್ಟಿ ಶಸ್ತ್ರಚಿಕಿತ್ಸೆ ಮೂಲಕ ಹುಡುಗಿಯಾಗಿ ಬದಲಾದ ಪಾತ್ರದಲ್ಲಿ ಅದಾ ನಟಿಸುತ್ತಿದ್ದಾರೆ.