ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರಚಾರದ ಸಲುವಾಗಿ ನಿನ್ನೆ ಸಲ್ಮಾನ್ ಖಾನ್ ಅಹಮದಾಬಾದ್ಗೆ ತೆರಳಿದ್ದರು. ಈ ವೇಳೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶ್ರಮಕ್ಕೂ ಭೇಟಿ ನೀಡಿದ್ದರು.
ನಟ ಸಲ್ಮಾನ್ ಖಾನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಸೋಮವಾರದಂದು ಅಹಮದಾಬಾದ್ಗೆ ಭೇಟಿ ನೀಡಿದ್ದರು. ಬಳಿಕ ಅವರು ಸಬರಮತಿ ಆಶ್ರಮಕ್ಕೂ ವಿಸಿಟ್ ಕೊಟ್ಟಿದ್ದರು. ಆಶ್ರಮದಲ್ಲಿ 20 ರಿಂದ 25 ನಿಮಿಷಗಳ ಕಾಲ ಅಲ್ಲಿದ್ದ ಅವರು, ಚರಕದಿಂದ ನೂಲು ನೇಯಲು ಯತ್ನಿಸಿದರು. ಆಶ್ರಮವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಇನ್ನು ಸಲ್ಮಾನ್ ಖಾನ್ ನೋಡಲು ಅಭಿಮಾನಿಗಳು ಆಶ್ರಮದ ಹೊರಗೆ ಜಮಾಯಿಸಿದ್ದರು.
'ಅಂತಿಮ್- ದಿ ಫೈನಲ್ ಟ್ರುತ್' - ಇದೊಂದು ಗ್ಯಾಂಗ್ಸ್ಟರ್ ಕಥಾಹಂದರ ಇರುವ ಚಿತ್ರವಾಗಿದ್ದು, 2018ರಲ್ಲಿ ಬಿಡುಗಡೆಯಾದ ಮರಾಠಿಯ ಹಿಟ್ ಚಿತ್ರ 'ಮುಲ್ಶಿ ಪ್ಯಾಟರ್ನ್'ನ ರೀಮೇಕ್ ಆಗಿದೆ. ಮೂಲ ಚಿತ್ರವನ್ನು ಮರಾಠಿ ನಟ, ಚಲನಚಿತ್ರ ನಿರ್ಮಾಪಕ ಪ್ರವೀಣ್ ಟಾರ್ಡೆ ನಿರ್ಮಿಸಿದ್ದರೆ, ಹಿಂದಿಯ ರೀಮೇಕ್ ಅನ್ನು ನಟ, ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ ನಿರ್ಮಿಸಿದೆ. ಕನ್ನಡಿಗ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷವಾಗಿದೆ.
ಸಲ್ಮಾನ್ ಮನವಿ:
ಇನ್ನು ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಸಿಡಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಲ್ಮಾನ್ ಖಾನ್, ಪೋಸ್ಟರ್ಗಳ ಮೇಲೆ ಹಾಲು ಸುರಿದು ವ್ಯರ್ಥ ಮಾಡದಂತೆಯೂ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಹಾಲನ್ನು ವ್ಯರ್ಥ ಮಾಡಬೇಡಿ, ಬಡಮಕ್ಕಳಿಗೆ ನೀಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ