ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದೆ. ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಕಚೇರಿಗೆ ಆಗಮಿಸಿದ್ದಾರೆ.
ಎನ್‌ಸಿಬಿ ವಿಚಾರಣೆಗೆ ರಿಯಾ ಈಗ ಮೂರನೇ ಬಾರಿ ಹಾಜರಾದಂತಾಗಿದೆ. ಭಾನುವಾರ ಆರು ಗಂಟೆಗಳ ಕಾಲ ಹಾಗೂ ಸೋಮವಾರ ಎಂಟು ಗಂಟೆಗಳ ಕಾಲ ಎನ್‌ಸಿಬಿ ಅಧಿಕಾರಿಗಳು ರಿಯಾಳನ್ನು ವಿಚಾರಣೆಗೆ ಒಳಪಡಿಸಿದ್ದರು. ಒಟ್ಟು ಎರಡು ಎನ್‌ಸಿಬಿ ತಂಡಗಳು ವಿಚಾರಣೆ ನಡೆಸುತ್ತಿವೆ.
ಪ್ರಕರಣ ಸಂಬಂಧ ಸುಶಾಂತ್ ಮನೆಯ ನಿರ್ವಾಹಕನಾಗಿದ್ದ ಸ್ಯಾಮ್ಯುಯೆಲ್ ಮಿರಾಂಡಾ ಎಂಬುವರನ್ನು ಸೆ. 9ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆ ವೇಳೆ ಸ್ಯಾಮ್ಯುಯೆಲ್ ಮಿರಾಂಡಾ ಬಗ್ಗೆ ತನಗೆ ತಿಳಿದಿದೆ ಎಂದು ರಿಯಾ ಚಕ್ರವರ್ತಿ ಎನ್‌ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.