ಖ್ಯಾತ ಬಾಲಿವುಡ್ ನಟ, 'ಆಶಿಕಿ' ಸಿನಿಮಾ ಖ್ಯಾತಿಯ ರಾಹುಲ್ ರಾಯ್ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 52 ವರ್ಷದ ನಟ ರಾಹುಲ್ ರಾಯ್, ಕಾರ್ಗಿಲ್ ಹಿಮಾವೃತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲಿ ಬ್ರೈನ್ ಸ್ಟ್ರೋಕ್ಗ ಒಳಗಾಗಿದ್ದು ಕೂಡಲೇ ಚಿತ್ರತಂಡ ರಾಹುಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದೆ.
ಭಾರತೀಯ ಸೈನಿಕರ ಕುರಿತಂತೆ ತಯಾರಾಗುತ್ತಿರುವ 'ಎಲ್ಒಸಿ: ಲೈವ್ ದಿ ಬ್ಯಾಟಲ್ ಇನ್ ಕಾರ್ಗಿಲ್' ಸಿನಿಮಾದಲ್ಲಿ ರಾಹುಲ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕಾರ್ಗಿಲ್ ಹಿಮಾಚ್ಛಾದಿತ ಪ್ರದೇಶದಲ್ಲಿ ನಡೆಯುತ್ತಿತ್ತು. ಮೈನಸ್ 15 ಡಿಗ್ರಿ ವಾತಾವರಣ ಇರುವ ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ವೇಳೆ ರಾಹುಲ್ ರಾಯ್ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ಕೂಡಲೇ ಚಿತ್ರತಂಡ ರಾಹುಲ್ ಅವರನ್ನು ಸ್ಥಳದಲ್ಲಿದ್ದ ಸೇನಾಧಿಕಾರಿಗಳ ಸಹಾಯದಿಂದ ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ದಾಖಲಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ರಾಹುಲ್ ರಾಯ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಹುಲ್ ರಾಯ್ ನಟಿಸಿರುವ 'ಆಶಿಕಿ' ಸಿನಿಮಾ ನಿಮಗೆ ನೆನಪಿರಬಹುದು. 1990 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಆ ಸಮಯದಲ್ಲಿ ಸೂಪರ್ ಹಿಟ್ ಆಗಿತ್ತು. ಯುವಜನತೆಯಂತೂ ಈ ಸಿನಿಮಾ ನೋಡಿ ಬಹಳ ಫಿದಾ ಆಗಿದ್ದರು. ರಾಹುಲ್ ರಾಯ್ಗೆ ಇದು ಮೊದಲ ಸಿನಿಮಾ. ನಟಿಸಿದ ಮೊದಲ ಸಿನಿಮಾದಲ್ಲೇ ರಾಹುಲ್ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದ್ದರು. ಚಿತ್ರದಲ್ಲಿ ರಾಹುಲ್ ಜೊತೆ ಅನು ಅಗರ್ವಾಲ್ ನಟಿಸಿದ್ದರು. ಈ ಸಿನಿಮಾ ನಂತರ ರಾಹುಲ್ ರಾಯ್ ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಕೂಡಾ ಆಶಿಕಿ ಚಿತ್ರದಂತೆ ಅವರಿಗೆ ಬೇರೆ ಯಾವ ಸಿನಿಮಾ ಕೂಡಾ ಹೆಸರು ನೀಡಲಿಲ್ಲ.