ಸ್ಯಾನ್ ಫ್ರಾನ್ಸಿಸ್ಕೊ : ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ ಆಗಿರುವ ಜೂಮ್, ಓಪನ್ ಎಐ (OpenAI) ನೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಈ ಮೂಲಕ ಚಾಟ್ಜಿಪಿಟಿಯ ವೈಶಿಷ್ಟ್ಯಗಳು ಇನ್ನು ಮುಂದೆ ಜೂಮ್ನಲ್ಲೂ ಸಿಗಲಿವೆ. OpenAI ಇದು ಎಐ ಚಾಟ್ಬಾಟ್ ಆಗಿರುವ ಚಾಟ್ಜಿಪಿಟಿಯ (ChatGPT) ಸೃಷ್ಟಿಕರ್ತ ಕಂಪನಿಯಾಗಿದೆ. ಹೀಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಾದ ಚಾಟ್ ಥ್ರೆಡ್ ಸಮರೈಸ್ ಮಾಡುವುದು, ಐಡಿಯಾ ಆರ್ಗನೈಸ್ ಮಾಡುವುದು, ಚಾಟ್ಗಳಿಗೆ ಕಂಟೆಂಟ್ ಡ್ರಾಫ್ಟ್ ಮಾಡುವುದು, ಮೀಟಿಂಗ್ ಅಜೆಂಡಾ ತಯಾರಿಸುವುದು ಹಾಗೂ ಎಐ ಆಧರಿತ ಅಸಿಸ್ಟಂಟ್ ನಿರ್ವಹಿಸುವ ಎಲ್ಲ ವೈಶಿಷ್ಟ್ಯಗಳು ಇನ್ನು ಮುಂದೆ ಜೂಮ್ ಆ್ಯಪ್ನಲ್ಲಿ ಲಭ್ಯವಾಗಲಿವೆ. ಜೂಮ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಲಿರುವ ಆ್ಯಪ್ಗಳ ಸಾಲಿಗೆ ಸೇರಲಿದೆ.
ಕಂಪನಿಯ ಪ್ರಕಾರ, Zoom IQ ನ ವೈಶಿಷ್ಟ್ಯಗಳು ಬಳಕೆದಾರರಿಗೆ ತಮ್ಮ ಕೆಲಸವನ್ನು ಮತ್ತಷ್ಟು ಸುಲಭವಾಗಿ ಮಾಡಲು ಸಹಾಯ ಮಾಡಲಿವೆ. ಉದಾಹರಣೆಗೆ, ತಂಡದ ಸದಸ್ಯರು ತಮ್ಮ ಜೂಮ್ ಸಭೆಗೆ ತಡವಾಗಿ ಸೇರಿದರೆ, ಅವರು ನೈಜ ಸಮಯದಲ್ಲಿ ತಾವು ತಪ್ಪಿಸಿಕೊಂಡದ್ದನ್ನು ಸಂಗ್ರಹಿಸಿ ತಮ್ಮ ಮುಂದೆ ಪ್ರಸ್ತುತ ಪಡಿಸಲು Zoom IQ ಅನ್ನು ಕೇಳಬಹುದು ಮತ್ತು ಅದಕ್ಕೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಬಹುದು.
ಇದಲ್ಲದೆ, ಬಳಕೆದಾರರು ತಮ್ಮ ಜೂಮ್ ಮೀಟ್ಗಾಗಿ ವೈಟ್‌ಬೋರ್ಡ್ ಸೆಶನ್ ಅನ್ನು ರಚಿಸಬೇಕಾದರೆ, ಜೂಮ್ ಐಕ್ಯೂ ಪಠ್ಯ ಪ್ರಾಂಪ್ಟ್‌ಗಳ ಆಧಾರದ ಮೇಲೆ ಅದನ್ನು ರಚಿಸಬಹುದು. ಜೂಮ್ ಮೀಟಿಂಗ್ನಲ್ಲಿರುವಾಗ ಕೆಲವೊಮ್ಮೆ ನೀವು ಒಂದೆರಡು ನಿಮಿಷ ಮೀಟ್ ಬಿಟ್ಟು ಆಚೆ ಹೋಗುವ ಪ್ರಮೇಯ ಬರಬಹುದು. ಹಾಗೆ ಹೋಗಿ ಮತ್ತೆ ಬಂದಾಗ ನಿಮ್ಮೆದುರಿಗೆ ಸಾಕಷ್ಟು ಮೆಸೇಜುಗಳ ಪಟ್ಟಿಯೇ ಇರುತ್ತದೆ.
ಸರಿಯಾದ ಪದಗಳನ್ನು ಹುಡುಕಿ ಹೇಳುತ್ತೆ ಚಾಟ್ಜಿಪಿಟಿ: ಥ್ರೆಡ್‌ನ ಸಾರಾಂಶವನ್ನು ಒದಗಿಸುವ ಮೂಲಕ ಸಮರಿ ಪಡೆಯಲು ಜೂಮ್ ಐಕ್ಯೂ ನಿಮಗೆ ಸಹಾಯ ಮಾಡುತ್ತದೆ. ಒಂದು ಬಾರಿ ನೀವು ಜೂಮ್ ಮೀಟಿಂಗ್ ಅನ್ನು ನಿಮ್ಮದೇ ಆದ ವೇಗದಲ್ಲಿ ನಡೆಸುತ್ತಿರುವಾಗ ಜೂಮ್ ಐಕ್ಯೂ ಚಾಟ್ ಸಂಯೋಜನೆಯು ನಿಮಗಾಗಿ ಪ್ರತಿಕ್ರಿಯೆಯನ್ನು ರಚಿಸುವ ಮೂಲಕ ಸರಿಯಾದ ಪದಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ ಪ್ರತಿಕ್ರಿಯೆಗಳನ್ನು ಮರುಹೊಂದಿಸುತ್ತದೆ.
ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ: ನಾವು ಏಪ್ರಿಲ್‌ನಲ್ಲಿ ಆಹ್ವಾನದ ಮೂಲಕ ಆಯ್ದ ಕೆಲ ಗ್ರಾಹಕರಿಗೆ ಕೆಲ ವೈಶಿಷ್ಟ್ಯಗಳನ್ನು ಪರಿಚಯಿಸಲು ಯೋಜಿಸುತ್ತಿದ್ದೇವೆ. ಜೂಮ್ ಐಕ್ಯೂ ಚಾಟ್ ಕಂಪೋಸ್, ಜೂಮ್ ಐಕ್ಯೂ ಇಮೇಲ್ ಕಂಪೋಸ್ ಮತ್ತು ಆಯ್ಕೆಮಾಡಿದ ಜೂಮ್ ಐಕ್ಯೂ ಮೀಟಿಂಗ್ ಸಾರಾಂಶ ವೈಶಿಷ್ಟ್ಯಗಳು ಹೆಚ್ಚು ವಿಶಾಲವಾಗಿ ಲಭ್ಯವಿರುತ್ತವೆ ಎಂದು ಜೂಮ್ ಕಂಪನಿ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ. ಕಂಪನಿಯು ಜೂಮ್ ಮೇಲ್ ಮತ್ತು ಕ್ಯಾಲೆಂಡರ್ ಅನ್ನು ಸಹ ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ಎಲ್ಲಾ ಪ್ರಮುಖ ಸಂವಹನಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ. ಇನ್ನು ಮುಂದೆ ಇನ್‌ಬಾಕ್ಸ್ ಮತ್ತು ಜೂಮ್ ಟೀಮ್ ಚಾಟ್ ನಡುವೆ ಹುಡುಕಾಟದ ಅಗತ್ಯವಿರುವುದಿಲ್ಲ. ಹೆಚ್ಚುವರಿಯಾಗಿ, ಜೂಮ್ ಹೊಸ ವೀಡಿಯೊ ಸಕ್ರಿಯಗೊಳಿಸಿದ ವರ್ಚುವಲ್ ಕೆಲಸದ ಸ್ಥಳ ಹಡಲ್ಸ್ ಅನ್ನು ವಿನ್ಯಾಸಗೊಳಿಸಿದೆ.
ಇದನ್ನೂ ಓದಿ : ತಾನಾಗಿಯೇ ಇಂಟರ್ನೆಟ್ ಬ್ರೌಸ್ ಮಾಡುತ್ತೆ ಚಾಟ್ಜಿಪಿಟಿ: ಹೊಸ ಪ್ಲಗಿನ್ ಕೈಚಳಕ!