ನವದೆಹಲಿ: ಎಕ್ಸ್ ತನ್ನಲ್ಲಿ ಪೋಸ್ಟ್ ಆಗುವ ನ್ಯೂಸ್ ಯುಆರ್ಎಲ್ಗಳ ಟೈಟಲ್ಗಳನ್ನು ಮತ್ತೊಮ್ಮೆ ತೋರಿಸಲು ಆರಂಭಿಸಲಿದೆ. ಎಕ್ಸ್ನ ವಿನ್ಯಾಸವು ಅಂದವಾಗಿ ಕಾಣಬೇಕೆಂಬ ಕಾರಣ ಮುಂದಿಟ್ಟು ಕಳೆದ ತಿಂಗಳಿಂದ ನ್ಯೂಸ್ಲಿಂಕ್ಗಳ ಹೆಡ್ಲೈನ್ಗಳನ್ನು ತೋರಿಸುವುದನ್ನು ನಿಲ್ಲಿಸಿತ್ತು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಲೋನ್ ಮಸ್ಕ್, ಮುಂದಿನ ಅಪ್ಡೇಟ್ನಲ್ಲಿ ನ್ಯೂಸ್ ಹೆಡ್ಲೈನ್ ತೋರಿಸುವಿಕೆಯ ವೈಶಿಷ್ಟ್ಯ ಮರಳಲಿದೆ ಎಂದು ಹೇಳಿದ್ದಾರೆ.
"ಮುಂಬರುವ ಅಪ್ಡೇಟ್ನಲ್ಲಿ ಯುಆರ್ಎಲ್ ಕಾರ್ಡ್ನ ಚಿತ್ರದ ಮೇಲ್ಭಾಗದಲ್ಲಿ ಶೀರ್ಷಿಕೆ ಕಾಣಿಸಲಿದೆ. ಆದಾಗ್ಯೂ ಈಗಲೂ ಶೀರ್ಷಿಕೆಗಳು ಚಿತ್ರದ ಮೇಲಿರುತ್ತವೆ" ಎಂದು ಮಸ್ಕ್ ತಿಳಿಸಿದ್ದಾರೆ.
ಅಕ್ಟೋಬರ್ನಿಂದ ನ್ಯೂಸ್ ಪೋಸ್ಟ್ಗಳ ಹೆಡ್ಲೈನ್ಗಳು ನೇರವಾಗಿ ಕಾಣದಂತೆ ಎಕ್ಸ್ ಬದಲಾವಣೆ ಮಾಡಿತ್ತು. ನ್ಯೂಸ್ ಹೆಡ್ಲೈನ್ ನೋಡಬೇಕಾದರೆ ಯುಆರ್ಎಲ್ ಕ್ಲಿಕ್ ಮಾಡುವುದು ಅನಿವಾರ್ಯವಾಗಿತ್ತು. ಇದು ಬಳಕೆದಾರರಿಗೆ ಕಿರಿಕಿರಿಯ ವಿಷಯವಾಗಿತ್ತು. ಐಬಿಎಂ, ಆಪಲ್, ಡಿಸ್ನಿ, ವಾರ್ನರ್ ಬ್ರದರ್ಸ್, ಡಿಸ್ಕವರಿ, ಪ್ಯಾರಾಮೌಂಟ್ ಮತ್ತು ಕಾಮ್ಕ್ಯಾಸ್ಟ್ / ಎನ್ಬಿಸಿ ಯುನಿವರ್ಸಲ್ನಮಥ ಹಲವಾರು ಉನ್ನತ ಕಂಪನಿಗಳು ಎಕ್ಸ್ನಲ್ಲಿ ಜಾಹೀರಾತು ನೀಡುವುದನ್ನು ನಿಲ್ಲಿಸಿದ ನಂತರ ಎಕ್ಸ್ ಈ ಹೊಸ ಬದಲಾವಣೆ ಮಾಡಿರುವುದು ಗಮನಾರ್ಹ.
ಎಡಪಂಥೀಯ ವಿಚಾರಧಾರೆಯ, ಲಾಭರಹಿತ ಮಾಧ್ಯಮ ಕಂಪನಿ ಮೀಡಿಯಾ ಮ್ಯಾಟರ್ಸ್ ವಿರುದ್ಧ ಮಸ್ಕ್ ಮೊಕದ್ದಮೆ ಹೂಡಿದ್ದಾರೆ. ಮೀಡಿಯಾ ಮ್ಯಾಟರ್ಸ್ ತಮ್ಮ ಕಂಪನಿಯ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಕಂಪನಿಗೆ ಬರಬೇಕಾದ ಲಾಭ ಬರದಂತೆ ಸಂಚು ಮಾಡುತ್ತಿದೆ ಎಂದು ಮಸ್ಕ್ ಆರೋಪಿಸಿದ್ದಾರೆ.
ಅಡಾಲ್ಫ್ ಹಿಟ್ಲರ್ ಮತ್ತು ಅವರ ನಾಜಿ ಪಕ್ಷದ ವಿಷಯಗಳನ್ನು ತೋರಿಸುವ ಪೋಸ್ಟ್ಗಳ ಪಕ್ಕದಲ್ಲಿಯೇ ಆಪಲ್ ಮತ್ತು ಐಬಿಎಂನಂಥ ಪ್ರಮುಖ ಕಂಪನಿಗಳ ಜಾಹೀರಾತುಗಳನ್ನು ಎಕ್ಸ್ ಪ್ರದರ್ಶಿಸುತ್ತಿದೆ ಎಂದು ಮೀಡಿಯಾ ಮ್ಯಾಟರ್ಸ್ ಆರೋಪಿಸಿತ್ತು. ಇದರ ನಂತರ ಹಲವಾರು ಪ್ರಖ್ಯಾತ ಬ್ರ್ಯಾಂಡ್ಗಳು ಎಕ್ಸ್ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿವೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಎಕ್ಸ್ ಸಿಇಒ ಲಿಂಡಾ ಯಾಕರಿನೊ ಅವರು ವೇದಿಕೆಯಲ್ಲಿ ಸತ್ಯ ಮತ್ತು ನ್ಯಾಯಸಮ್ಮತತೆಗೆ ತಾವು ಬದ್ಧರಾಗಿರುವುದಾಗಿ ಹೇಳಿದರು.
ಅಕ್ಟೋಬರ್ 2022 ರಲ್ಲಿ ಮಸ್ಕ್ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ (40 ಬಿಲಿಯನ್ ಯುರೋ) ಗೆ ಖರೀದಿಸಿದಾಗಿನಿಂದ, ಮಸ್ಕ್ ಅವರ ವಿವಾದಾತ್ಮಕ ಪೋಸ್ಟ್ಗಳು ಮತ್ತು ನೌಕರರನ್ನು ವಜಾಗೊಳಿಸುವಿಕೆಯಿಂದಾಗಿ ಹಲವಾರು ಜಾಹೀರಾತುದಾರರು ವೇದಿಕೆಯಿಂದ ದೂರ ಸರಿದಿದ್ದಾರೆ. ಮಸ್ಕ್ ಅಧಿಕಾರ ವಹಿಸಿಕೊಂಡಾಗಿನಿಂದ ಎಕ್ಸ್ನ ಜಾಹೀರಾತು ಆದಾಯವು ಪ್ರತಿ ತಿಂಗಳು ಕನಿಷ್ಠ 55% ರಷ್ಟು ಕುಸಿದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಶೇ 95ರಷ್ಟು ಇಂಟರ್ನೆಟ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯ: ವರದಿ