ನವದೆಹಲಿ: ಇದೇ ಫೆಬ್ರವರಿ 8ರ ಬೆಳಗ್ಗೆ 8:30 ಕ್ಕೆ ನಡೆಯಲಿರುವ ಗೂಗಲ್ ಈವೆಂಟ್‌ನಲ್ಲಿ ಗೂಗಲ್ ತನ್ನ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಪ್ರಗತಿಯನ್ನು ಅನಾವರಣಗೊಳಿಸಲಿದೆ. ಜನರು ಮಾಹಿತಿಯನ್ನು ಹುಡುಕುವ, ಅನ್ವೇಷಿಸುವ ಮತ್ತು ತೊಡಗಿಸಿಕೊಳ್ಳುವ ರೀತಿಯನ್ನು ಕಂಪನಿಯು AI ಮೂಲಕ ಹೇಗೆ ಬದಲಾಯಿಸಲಿದೆ ಮತ್ತು ಈ ಪ್ರಕ್ರಿಯೆಯನ್ನು ಮತ್ತಷ್ಟು ಶ್ರಮರಹಿತ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಹೇಗೆ ಮಾಡಲಿದೆ ಎಂಬುದನ್ನು ಈವೆಂಟ್‌ನಲ್ಲಿ Google ಪ್ರದರ್ಶಿಸಲಿದೆ.
ಈವೆಂಟ್‌ನ ಸಮಯದಲ್ಲಿ Google ಹೊಸ ಸೇವೆ ಅಥವಾ ಉತ್ಪನ್ನವನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆಯೇ ಎಂಬುದು ಖಚಿತವಾಗಿಲ್ಲ. ಆದಾಗ್ಯೂ ವೇಗವಾಗಿ ಬೆಳೆಯುತ್ತಿರುವ OpenAI ಯ ಚಾಟ್‌ಬಾಟ್ ChatGPT ಗೆ ಉತ್ತರವಾಗಿ ತನ್ನದೇ ಕೃತಕ ಬುದ್ಧಿಮತ್ತೆ ಚಾಟ್ ಬಾಟ್ ಒಂದನ್ನು ಗೂಗಲ್ ಅನಾವರಣಗೊಳಿಸಬಹುದು ಎನ್ನಲಾಗಿದೆ. OpenAI ನ ಚಾಟ್‌ಬಾಟ್ ChatGPT ಕಳೆದ ಕೆಲವು ದಿನಗಳಿಂದ ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವರದಿಯ ಪ್ರಕಾರ ಜನವರಿಯಲ್ಲಿ ChatGPT 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದೆ. ಇದು ಇನ್ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂಥ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್, ಓಪನ್ ಎಐನ ಚಾಟ್‌ಜಿಪಿಟಿ ಪ್ರಾರಂಭವಾದ ನಂತರ ತನ್ನ ಸರ್ಚ್ ಎಂಜಿನ್ ವ್ಯವಹಾರಕ್ಕೆ ಕುತ್ತು ಬರುವ ಸಾಧ್ಯತೆಯನ್ನು ಊಹಿಸಿದೆ. ಹೀಗಾಗಿ ಕಂಪನಿ ಆಂತರಿಕವಾಗಿ ಕೋಡ್ ರೆಡ್ ಅನ್ನು ಘೋಷಿಸಿದೆ. ಹೀಗಾಗಿ ಗೂಗಲ್ ಹಲವಾರು ಹೊಸ AI ಪರಿಕರಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಅದರಲ್ಲಿ ಒಂದು ಚಾಟ್‌ಬಾಟ್ ಅಪ್ರೆಂಟಿಸ್ ಬಾರ್ಡ್ (Apprentice Bard).
ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಗೂಗಲ್ ಓಪನ್ ಎಐಗೆ ಪ್ರಮುಖ ಪ್ರತಿಸ್ಪರ್ಧಿಯಾದ ಆಂಥ್ರೊಪಿಕ್‌ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಆಂಥ್ರೊಪಿಕ್‌ನ ಇತ್ತೀಚೆಗೆ ಬಿಡುಗಡೆ ಮಾಡಲಾದ ಜನರೇಟಿವ್ AI ಮಾದರಿ, ಕ್ಲೌಡ್, ChatGPT ಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಈ ಹೂಡಿಕೆಯ ಮೂಲಕ ಗೂಗಲ್ ಆಂಥ್ರೊಪಿಕ್‌ನಲ್ಲಿ ಶೇ 10 ರಷ್ಟು ಪಾಲು ಪಡೆಯಲಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಆಂಥ್ರೊಪಿಕ್ ಕಂಪನಿಯು ಅಂದಾಜು 5 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ. OpenAI ನಲ್ಲಿ ಮೈಕ್ರೋಸಾಫ್ಟ್ ಇತ್ತೀಚಿನ 10 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದು ಗಮನಾರ್ಹ. ಅದರ ನಂತರ ಗೂಗಲ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಇದು AI ಉತ್ಪಾದಕ ವಲಯದಲ್ಲಿ ದೊಡ್ಡ ತಂತ್ರಜ್ಞಾನ ಕಂಪನಿಗಳ ನಡುವೆ ಸ್ಪರ್ಧೆ ತೀವ್ರಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.
ಆದಾಗ್ಯೂ, ತನ್ನ AI ಉತ್ಪನ್ನಗಳನ್ನು ತಮ್ಮ ಆರಂಭಿಕ ಹಂತಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಗೂಗಲ್ಗೆ ಎಂದಿಗೂ ಅನಿಸಿರಲಿಲ್ಲ. ಆದರೆ ಈಗ ChatGPT ಯ ಲಭ್ಯತೆಯ ನಂತರ ಗೂಗಲ್ ತನ್ನ ನೀತಿಯನ್ನು ಅನಿವಾರ್ಯವಾಗಿ ಬದಲಾಯಿಸಿದೆ. ChatGPT ಗೆ ಪರ್ಯಾಯವಾದ ಅಪ್ಲಿಕೇಶನ್ ಹೊರತರಲು ಗೂಗಲ್ ಎಷ್ಟು ತಡ ಮಾಡುತ್ತದೋ ಅಷ್ಟು ವ್ಯಾಪಕವಾಗಿ ChatGPT ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿದೆ.
ಇದನ್ನೂ ಓದಿ: ಬ್ಲೂ ಟಿಕ್ ಕ್ರಿಯೆಟರ್ಗಳೊಂದಿಗೆ ಟ್ವಿಟರ್ ಆದಾಯ ಹಂಚಿಕೊಳ್ಳಲಿದೆ; ಮಸ್ಕ್