ನವದೆಹಲಿ: ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಯುಕೆ ಸೇರಿದಂತೆ 60 ದೇಶಗಳು ಸಹಿ ಮಾಡಿದ 'ಭವಿಷ್ಯಕ್ಕಾಗಿ ಇಂಟರ್ನೆಟ್ ಘೋಷಣೆ' ಒಪ್ಪಂದದಿಂದ ಭಾರತ, ರಷ್ಯಾ ಮತ್ತು ಚೀನಾ ಹೊರಗುಳಿದಿದೆ. ಈ ಮೂರು ಪ್ರಮುಖ ರಾಷ್ಟ್ರಗಳು ಅನುಪಸ್ಥಿತಿ ಹಲವು ಅಚ್ಚರಿಗಳ ಜತೆ ಅನುಮಾನಗಳಿಗೆ ಕಾರಣವಾಗಿದೆ. ಇನ್ನು ವಿಶೇಷ ಎಂದರೆ ಉಕ್ರೇನ್ ಸಹ ಭವಿಷ್ಯಕ್ಕಾಗಿ ಇಂಟರ್ನೆಟ್ ಘೋಷಣೆಗೆ ಸಹಿ ಹಾಕಿದೆ.
ಮುಕ್ತ, ಉಚಿತ, ಜಾಗತಿಕ, ಇಂಟರ್ ಆಪರೇಬಲ್, ವಿಶ್ವಾಸಾರ್ಹ ಮತ್ತು ಸುರಕ್ಷಿತ ಇಂಟರ್ನೆಟ್ ಪೂರೈಕೆ ಮತ್ತು ಬಳಕೆಗೆ ಘೋಷಣೆಯಲ್ಲಿ ಭಾರಿ ಮಹತ್ವ ನೀಡಲಾಗಿದೆ. ಇದೇ ವೇಳೆ, ಚೀನಾದ ಸಾಮಾಜಿಕ ಕ್ರೆಡಿಟ್ ಸ್ಕೋರ್‌ನ ಪಾರದರ್ಶಕತೆ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಜೋ ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಭಾರತ ಈ ಘೋಷಣೆಗೆ ಸೇರಲು ಸಮಯ ಮೀರಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಪಂಚದಾದ್ಯಂತ ಸಮಾನ ಮನಸ್ಕ ರಾಷ್ಟ್ರಗಳು ಈ ಘೋಷಣೆಗೆ ಬೆಂಬಲ ನೀಡುತ್ತವೆ ಎಂಬ ವಿಶ್ವಾಸ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಲವು ದೇಶಗಳು ಅಭಿವ್ಯಕ್ತಿ ಸ್ವಾತಂತ್ರ್ಯ ನಿಗ್ರಹಿಸಲು, ಸ್ವತಂತ್ರ ಸುದ್ದಿ ಮೂಲಗಳನ್ನು ಸೆನ್ಸಾರ್ ಮಾಡಲು, ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಲು, ಪ್ರಪಂಚದಾದ್ಯಂತ ತಪ್ಪು ಮಾಹಿತಿಯನ್ನು ಉತ್ತೇಜಿಸಲು ಮತ್ತು ತಮ್ಮ ನಾಗರಿಕರಿಗೆ ಇತರ ಸವಲತ್ತುಗಳನ್ನು ನಿರಾಕರಿಸುವ ಡಿಜಿಟಲ್ ಸರ್ವಾಧಿಕಾರದ ಪ್ರವೃತ್ತಿಯನ್ನು ಅವರು ನೋಡುತ್ತಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಉಕ್ರೇನ್‌ನಲ್ಲಿ ರಷ್ಯಾ ಮಾಡಿದ್ದೇನು?: ಕಳೆದ ಎರಡು ತಿಂಗಳಲ್ಲಿ ಉಕ್ರೇನ್‌ನಲ್ಲಿ ಆಕ್ರಮಣ ಮಾಡಿರುವ ರಷ್ಯಾ ಇಂಟರ್ನೆಟ್ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಮೇಲುನೋಟಕ್ಕೆ ಕಂಡು ಬರುತ್ತಿವೆ. ರಷ್ಯಾವು ದೇಶ - ವಿದೇಶಗಳಲ್ಲಿ ಆಕ್ರಮಣಕಾರಿಯಾಗಿ ತಪ್ಪು ಮಾಹಿತಿ ಪ್ರಚಾರ ಮಾಡಿದೆ, ಇಂಟರ್ನೆಟ್ ಸುದ್ದಿ ಮೂಲಗಳನ್ನು ಸೆನ್ಸಾರ್ ಮಾಡಿದೆ, ಕಾನೂನುಬದ್ಧ ಸೈಟ್‌ಗಳನ್ನು ನಿರ್ಬಂಧಿಸಿದೆ ಅಥವಾ ಮುಚ್ಚಿದೆ. ಉಕ್ರೇನ್‌ನಲ್ಲಿ ಇಂಟರ್ನೆಟ್ ಮೂಲಸೌಕರ್ಯದ ಮೇಲೆ ದಾಳಿ ಮಾಡಿದೆ ಎಂದು ಬೈಡನ್ ಆಡಳಿತ ಆರೋಪಿಸಿದೆ. ಚೀನಾದೊಂದಿಗೆ ಸೇರಿ ರಷ್ಯಾ ಸೆನ್ಸಾರ್ಗಳನ್ನು ಹೇರುತ್ತ ವಿಶ್ವದಲ್ಲಿ ಅಪಾಯಕಾರಿ ಇಂಟರ್ನೆಟ್ ನೀತಿಯನ್ನು ಜಾರಿಗೊಳಿಸಿವೆ ಎಂದಿದೆ.
ಅಂತರ್ಜಾಲ ರಕ್ಷಣೆಗೆ ನಾವು ಬದ್ಧ: ಇಲ್ಲಿಯವರೆಗೆ 60 ದೇಶಗಳು ಭವಿಷ್ಯಕ್ಕಾಗಿ ಇಂಟರ್ನೆಟ್ ಘೋಷಣೆಯನ್ನು ಅನುಮೋದಿಸಿವೆ. ಯುರೋಪಿಯನ್ ಕಮಿಷನ್ ಪ್ರಕಾರ, ಮುಂಬರುವ ವಾರಗಳಲ್ಲಿ ಇನ್ನಷ್ಟು ರಾಷ್ಟ್ರಗಳು ಈ ಘೋಷಣೆಯನ್ನು ಸೇರುವ ನಿರೀಕ್ಷೆಯಿದೆ. ಅಂತರ್ಜಾಲದ ಭವಿಷ್ಯಕ್ಕಾಗಿ (ಡಿಎಫ್‌ಐ) ಘೋಷಣೆಯನ್ನು ಜಾರಿಗೆ ತರುವ ಮೂಲಕ ದೇಶಗಳು ಒಗ್ಗೂಡುವುದುನ್ನು ನೋಡಲು ಅದ್ಬುತವಾಗಿದೆ ಎಂದು ಗೂಗಲ್ ಹೇಳಿದೆ. ಈ ಪ್ರಯತ್ನದ ಮೂಲಕ, ಸಾರ್ವಜನಿಕ ಮತ್ತು ಖಾಸಗಿ ವಲಯದ ಜಾಗತಿಕ ವೆಬ್‌ನ ಪ್ರಾಮುಖ್ಯತೆ ಹಾಗೂ ರಕ್ಷಣೆಗೆ ಒಟ್ಟಾಗಿ ಕೆಲಸ ಮಾಡಲು ಬತಸುತ್ತೇವೆ ಎಂದು ಗೂಗಲ್ ಹೇಳಿದೆ.
ಸಮುದಾಯಗಳ ಒಗ್ಗಟ್ಟಿಗೆ ಸಹಕಾರಿ: ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಬ್ರಾಡ್ ಸ್ಮಿತ್ ಈ ಬಗ್ಗೆ ಮಾತನಾಡಿ, ನಮಗೆ ಹೊಸ ಮತ್ತು ನವೀನ ಇಂಟರ್ನೆಟ್ ಉಪಕ್ರಮಗಳು ಬೇಕಾಗುತ್ತವೆ. ಈ ನೀತಿ ಮೂಲಕ ಸರ್ಕಾರ, ಎನ್‌ಜಿಒಗಳು, ಶೈಕ್ಷಣಿಕ ಸಂಶೋಧಕರು, ಟೆಕ್ ಕಂಪನಿಗಳು ಮತ್ತು ವ್ಯಾಪಾರ ಸಮುದಾಯದ ಒಗ್ಗಟ್ಟಿಗೆ ಕಾರಣವಾಗಲಿದೆ ಎಂದಿದ್ದಾರೆ.
ಇದನ್ನು ಓದಿ:ಅರ್ಧ ಗಂಟೆ ಚಾರ್ಜ್ ಮಾಡಿದರೆ 500 ಕಿ.ಮೀ ಮೈಲೇಜ್ ಕೊಡುವ ಟಾಟಾ 'ಅವಿನ್ಯಾ' ಕಾನ್ಸೆಪ್ಟ್ ಅನಾವರಣ