ಮೆಟಾ ಮಾಲೀಕತ್ವದ ತ್ವರಿತ ಮೆಸೇಜಿಂಗ್ ಮತ್ತು ಕರೆ ಮಾಡುವ ಫ್ಲ್ಯಾಟ್ಫಾರ್ಮ್ ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ಆ್ಯಪ್ ಅನ್ನು ಇನ್ನೂ ಆಪ್ತವಾಗಿಸಲು ಪ್ರತಿದಿನ ಒಂದಿಲ್ಲಾ ಒಂದು ಹೊಸ ವೈಶಿಷ್ಟ್ಯ(features) ಗಳನ್ನು ಸೇರಿಸುತ್ತಲೇ ಇದೆ. ಇತ್ತೀಚಿನ ಹೊಸ ಅಪ್ಡೇಟ್ ಎಂದರೆ ವಾಟ್ಸ್ ಆ್ಯಪ್ನಲ್ಲಿ ಹಂಚಿಕೊಳ್ಳುವ ಫೋಟೋಗಳು ಮತ್ತು ವಿಡಿಯೋಗಳ ಗರಿಷ್ಠ ಮಿತಿಯನ್ನು ಹೆಚ್ಚಿಸಿದೆ. ಮತ್ತು ವಾಟ್ಸ್ಆ್ಯಪ್ ವಿಂಡೋಸ್ ಬೀಟಾದಲ್ಲಿ ಚ್ಯಾಟ್ಗಳು ಮತ್ತು ಗ್ರೂಪ್ಗಳಲ್ಲಿ ಹೊಸ ಫೋಟೋ ಮತ್ತು ವಿಡಿಯೋ ಶಾರ್ಟ್ಕಟ್ ಫೀಚರ್ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ.
ವಾಟ್ಸ್ಆ್ಯಪ್ ಈ ಹಿಂದೆ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಮಾತ್ರ ಹಂಚಿಕೊಳ್ಳಲು ಅವಕಾಶ ನೀಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲು ವಾಟ್ಸ್ ಆ್ಯಪ್ ನಿರ್ಬಂಧ ಹೇರಿತ್ತು. ಆದರೆ ಈಗ ವಾಟ್ಸ್ಆ್ಯಪ್ನ ಅಪ್ಡೇಟೆಡ್ ಫೀಚರ್ನಲ್ಲಿ ಬಳಕೆದಾರರು ಏಕಕಾಲಕ್ಕೆ ಗರಿಷ್ಠ 100 ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬಹುದು.
ನಿಮ್ಮ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇತ್ತೀಚಿನ ವರ್ಷನ್ಗೆ ಅಪ್ಡೇಟ್ ಮಾಡಿಕೊಳ್ಳಿ, ಯಾವುದಾದರೂ ಒಂದು ವ್ಯಾಟ್ ತೆರೆದು ಅದರಲ್ಲಿ ನೀವು ಒಂದೇ ಬಾರಿಗೆ 30ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಫೋಟೋಗಳನ್ನು ಆಯ್ಕೆ ಮಾಡಿ ಕಳುಹಿಸಲು ಪ್ರಯತ್ನಿಸಿ. ಈ ವೈಶಿಷ್ಟ್ಯ ನಿಮ್ಮ ವಾಟ್ಸ್ ಆ್ಯಪ್ನಲ್ಲಿ ಅಪ್ಡೇಟ್ ಆಗಿದ್ದರೆ 30ಕ್ಕಿಂತ ಹೆಚ್ಚು ಮೀಡಿಯಾ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇಲ್ಲದೇ ಹೋದಲ್ಲಿ ಮುಂದಿನ ವಾಟ್ಸ್ ಆ್ಯಪ್ ಅಪ್ಡೇಟ್ ವರೆಗೆ ಕಾಯಬೇಕಾಗುತ್ತದೆ. ಯಾಕೆಂದರೆ Wabetainfo ಪ್ರಕಾರ, ಸದ್ಯ ಈ ಫೀಚರ್ ಟೆಸ್ಟ್‌ಫ್ಲೈಟ್‌ನಿಂದ iOS ಗಾಗಿ ವಾಟ್ಸ್ ಆ್ಯಪ್ ಬೀಟಾದ ಇತ್ತೀಚಿನ ಅಪ್ಡೇಟೆಡ್ ವರ್ಷನ್ ಇರುವ ಬೀಟಾ ಪರೀಕ್ಷಕರಿಗೆ ಮಾತ್ರ 100 ಮೀಡಿಯಾ ಫೈಲ್ಗಳನ್ನು ಹಂಚಿಕೊಳ್ಳುವ ಸಾಮರ್ಥ್ಯದ ಫೀಚರ್ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಈ ವೈಶಿಷ್ಟ್ಯವನ್ನು ಇನ್ನಷ್ಟು ಬಳಕೆದಾರರಿಗೂ ಹೊರತರಲಿದೆ.
ಹೊಸ ನವೀಕರಣಗಳ ಗುಚ್ಚ: ಇದೊಂದೇ ಅಲ್ಲದೆ ವಾಟ್ಸ್ಆ್ಯಪ್ ವಿಂಡೋಸ್ ಬೀಟಾದಲ್ಲಿ ಚಾಟ್‌ಗಳು ಮತ್ತು ಗುಂಪುಗಳಲ್ಲಿ ಹೊಸ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳ ಶಾರ್ಟ್ಕಟ್ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದೆ. ವರದಿ ಪ್ರಕಾರ ಹೊಸ ಆಯ್ಕೆ(Option) ನಲ್ಲಿ ಅಪ್ಲಿಕೇಶನ್ನಿಂದ ನೇರವಾಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ. ಈ ಹಿಂದೆ ಬಳಕೆದಾರರು ವಾಟ್ಸ್ಆ್ಯಪ್ ವಿಡೋಸ್ನಲ್ಲಿ ಫೋಟೋಗಳು ಅಥವಾ ವೀಡಿಯೋಗಳನ್ನು ಡ್ರ್ಯಾಗ್ ಮಾಡಿ ಕಳುಹಿಸಬೇಕಾದ ಚ್ಯಾಟ್ ಒಳಗೆ ಡ್ರಾಪ್ ಮಾಡಬೇಕಿತ್ತು. ಅಥವಾ ಫೈಲ್ಸ್ ಎಂಬ ಆಯ್ಕೆ ಮೂಲಕ ಹಂಚಿಕೊಳ್ಳಬೇಕಿತ್ತು. ಇಲ್ಲಿ ಫೋಟೋಗಳನ್ನು ಡಾಕ್ಯುಮೆಂಟ್ಗಳ ರೂಪದಲ್ಲಿ ಹಂಚಿಕೊಳ್ಳಲು ಅವಕಾಶವಿತ್ತು.
ಸದ್ಯ ಮೈಕ್ರೋಸಾಫ್ಟ್ ಸ್ಟೋರ್ನಲ್ಲಿ ಲಭ್ಯವಿರುವ Windows 2.2306.2.0 ಅಪ್‌ಡೇಟ್‌ಗಾಗಿ ವಾಟ್ಸ್ ಆ್ಯಪ್ ಬೀಟಾವನ್ನು ಸ್ಥಾಪಿಸಿದ ಬೀಟಾ ಪರೀಕ್ಷಕರಿಗೆ ಹೊಸ ಫೋಟೋ ಮತ್ತು ವಿಡಿಯೋ ಶಾರ್ಟ್‌ಕಟ್‌ಗಳನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಹೊರತರುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಿಂಡೋಸ್ ಬೀಟಾದಲ್ಲಿ ಕರೆಗಳಿಗೆ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ ಎಂದು ವರದಿಯಾಗಿತ್ತು. ಈ ವೈಶಿಷ್ಟ್ಯ ಬಳಕೆದಾರರಿಗೆ ಉಪಯುಕ್ತವಾಗಿದೆ. ಏಕೆಂದರೆ ಅನಿರೀಕ್ಷಿತ ಸಮಸ್ಯೆಯಿಂದಾಗಿ ಕರೆಗಳಿಗೆ ಅಧಿಸೂಚನೆಗಳು ಅಡಚಣೆ ಮಾಡಬೇಡಿ ಮೋಡ್ ಅನ್ನು ಸಕ್ರಿಯಗೊಳಿಸಿದಾಗಲೂ ಕಾಣಿಸಿಕೊಳ್ಳಬಹುದು, ಆದ್ದರಿಂದ ಬಳಕೆದಾರರು ಆ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಆ ದೋಷವನ್ನು ಸ್ವತಃ ಸರಿಪಡಿಸಬಹುದು.
ಇದನ್ನೂ ಓದಿ: ಬಿಸಿನೆಟ್ ವಾಟ್ಸ್ಆ್ಯಪ್ಗೆ ಗುಂಪುಗಳ ರಚನೆಗೆ ಸಹಾಯವಾಗುವಂತೆ ಹೊಸ ನವೀಕರಣ..! ಏನಿದು ಹೊಸ ಅಪ್ಡೇಟ್?