ನವದೆಹಲಿ : 2021 ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆ್ಯಪ್ ಮೇ ತಿಂಗಳಲ್ಲಿ ಭಾರತದಲ್ಲಿ 65 ಲಕ್ಷಕ್ಕೂ ಹೆಚ್ಚು ಅಕೌಂಟ್ಗಳನ್ನು ನಿಷೇಧಿಸಿದೆ ಎಂದು ಕಂಪನಿ ಭಾನುವಾರ ತಿಳಿಸಿದೆ. ಮೇ 1 ಮತ್ತು ಮೇ 31 ರ ನಡುವೆ 65,08,000 ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಇವುಗಳ ಪೈಕಿ 24,20,700 ಖಾತೆಗಳನ್ನು ಅವುಗಳ ವಿರುದ್ಧ ಯಾವುದೇ ದೂರು ಬರುವ ಮೊದಲೇ ನಿಷೇಧಿಸಲಾಗಿದೆ.
ಮೇ ತಿಂಗಳಲ್ಲಿ 3,912 ನಿಷೇಧ ಮೇಲ್ಮನವಿಗಳಂಥ ಕುಂದುಕೊರತೆ ರಿಪೋರ್ಟ್ಗಳು ವಾಟ್ಸ್ ಆ್ಯಪ್ಗೆ ಬಂದಿದ್ದವು ಮತ್ತು ಇವುಗಳ ಪೈಕಿ 297 ಪ್ರಕರಣಗಳಲ್ಲಿ ಕಂಪನಿ ಕ್ರಮ ಕೈಗೊಂಡಿದೆ. ತನಗೆ ಬಂದ ರಿಪೋರ್ಟ್ ಅನ್ನು ಆಧರಿಸಿ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿರುವುದನ್ನು ವರದಿ ಸೂಚಿಸುತ್ತದೆ ಮತ್ತು ಖಾತೆಯೊಂದನ್ನು ನಿಷೇಧಿಸುವುದು ಅಥವಾ ಈಗಾಗಲೇ ನಿಷೇಧಿಸಲ್ಪಟ್ಟ ಖಾತೆಯನ್ನು ಪುನಃ ಸ್ಥಾಪಿಸುವುದು ಇದರಲ್ಲಿ ಸೇರಿವೆ ಎಂದು ಕಂಪನಿ ತಿಳಿಸಿದೆ.
ಈ ಬಳಕೆದಾರ ಸುರಕ್ಷತಾ ವರದಿಯು ತಾನು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸ್ ಆ್ಯಪ್ ತೆಗೆದುಕೊಂಡ ಅನುಗುಣವಾದ ಕ್ರಮವನ್ನು ಒಳಗೊಂಡಿದೆ. ಜೊತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಗಟ್ಟಲು ವಾಟ್ಸ್ ಆ್ಯಪ್ ಆಂತರಿಕ ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆ್ಯಪ್ ಏಪ್ರಿಲ್ ತಿಂಗಳಲ್ಲಿ 74 ಲಕ್ಷಕ್ಕೂ ಹೆಚ್ಚು ದುರುದ್ದೇಶದ ಖಾತೆಗಳನ್ನು ಬ್ಯಾನ್ ಮಾಡಿತ್ತು.
ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (GAC)ಯನ್ನು ಪ್ರಾರಂಭಿಸಿದೆ. ಇದು ಕಂಟೆಂಟ್ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಳಕೆದಾರರ ದೂರುಗಳನ್ನು ಪರಿಶೀಲಿಸುತ್ತದೆ.
ಹೊಸದಾಗಿ ರಚಿಸಲಾದ ಸಮಿತಿಯು ಬಿಗ್ ಟೆಕ್ ಕಂಪನಿಗಳನ್ನು ಪಳಗಿಸಲು ಮತ್ತು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಪರಿಶೀಲಿಸುತ್ತದೆ. ಇಂಟರ್ನೆಟ್ ಅನ್ನು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವವಾಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಡಿಜಿಟಲ್ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕೆಲ ಕಾನೂನು ತಿದ್ದುಪಡಿಗಳನ್ನು ಸೂಚಿಸಿದೆ.
ಫೇಸ್‌ಬುಕ್ ಮಾಲೀಕತ್ವದ WhatsApp ಈಗ ವಿಶ್ವಾದ್ಯಂತ 1 ಶತಕೋಟಿ ಬಳಕೆದಾರರನ್ನು ಹೊಂದಿದೆ ಮತ್ತು ಮಾರುಕಟ್ಟೆಯಲ್ಲಿ ಅತಿದೊಡ್ಡ ಆನ್‌ಲೈನ್ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಮಾಜಿ ಯಾಹೂ ಉದ್ಯೋಗಿಗಳು 2009 ರಲ್ಲಿ ಇದನ್ನು ಆರಂಭಿಸಿದ್ದರು. ಇದು ಆರಂಭದಲ್ಲಿ ಸಣ್ಣ ಕಂಪನಿಯಾಗಿ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ 2,50,000 ಬಳಕೆದಾರರನ್ನು ಪಡೆದುಕೊಂಡಿತ್ತು. 2014 ರಲ್ಲಿ ವಾಟ್ಸ್ ಆ್ಯಪ್ ಅನ್ನು ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿತು. ಅಪ್ಲಿಕೇಶನ್ ನಿಮ್ಮ ಫೋನ್ ಸಂಖ್ಯೆಯನ್ನು ಯೂಸರ್ ನೇಮ್ ಆಗಿ ಬಳಸುತ್ತದೆ ಮತ್ತು ನಿಮ್ಮ ಖಾತೆಯನ್ನು ಫೋನ್‌ಗೆ ಲಾಕ್ ಮಾಡಲಾಗಿರುತ್ತದೆ.
ಇದನ್ನೂ ಓದಿ : ಕಂಪನಿ ವಿಳಾಸಗಳ ಜಿಯೋಟ್ಯಾಗಿಂಗ್ ಕಡ್ಡಾಯ: ನಕಲಿ ನೋಂದಣಿ ತಡೆಗೆ ಕ್ರಮ