ನವದೆಹಲಿ : ಎಲೋನ್ ಮಸ್ಕ್ ಈಗಲೂ ಟ್ವಿಟರ್ನಿಂದ ಉದ್ಯೋಗಿಗಳನ್ನು ವಜಾ ಮಾಡುವುದನ್ನು ಮುಂದುವರಿಸಿರುವ ಮಧ್ಯೆ, ಕಂಪನಿಯು ಇನ್ನು ಮುಂದೆ ಬಳಕೆದಾರರನ್ನು ಟ್ರೋಲಿಂಗ್ನಿಂದ, ಸರ್ಕಾರಿ ಪ್ರಾಯೋಜಿತ ಸುಳ್ಳು ಸುದ್ದಿಗಳಿಂದ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆಗಳಿಂದ ಸಂರಕ್ಷಿಸಲು ಸಾಧ್ಯವಾಗಲಾರದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸಾಮೂಹಿಕ ವಜಾ ಪ್ರಕ್ರಿಯೆಯ ಕಾರಣದಿಂದ ಕಂಟೆಂಟ್ ಸೇಫ್ಟಿ, ಮಿತಿಗೊಳಿಸುವಿಕೆ ಮತ್ತು ನೀತಿ ನಿಯಮ ರೂಪಿಸುವ ಕೆಲಸದಲ್ಲಿ ಅಡ್ಡಿ ಉಂಟಾಗಿದೆ. ಹೀಗಾಗಿ ಇನ್ನು ಮುಂದೆ ಬಳಕೆದಾರರನ್ನು ಟ್ರೋಲಿಂಗ್ ಹಾಗೂ ಕಿರುಕುಳದಿಂದ ರಕ್ಷಿಸುವ ಟೂಲ್ಗಳನ್ನು ಬಳಸುವುದು ಸಾಧ್ಯವಾಗಲಾರದು ಎಂದು ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಸ್ಕ್ ಸಿಬ್ಬಂದಿಯನ್ನು ಈಗಲೂ ವಜಾಗೊಳಿಸುತ್ತಿರುವುದರಿಂದ ಟ್ವಿಟರ್ ಉದ್ಯೋಗಿಗಳ ಸಂಖ್ಯೆ 2,000 ಕ್ಕಿಂತ ಕಡಿಮೆಯಾಗಿದೆ. ಕೆಲವೇ ತಿಂಗಳುಗಳ ಹಿಂದೆ ಈ ಸಂಖ್ಯೆ 7,500 ಕ್ಕಿಂತ ಹೆಚ್ಚಾಗಿತ್ತು. ಮಸ್ಕ್‌ನ ನಾಯಕತ್ವದಲ್ಲಿ ಕಂಪನಿಯಲ್ಲಿ ದ್ವೇಷ ಹೆಚ್ಚಾಗುತ್ತಿದೆ. ಟ್ರೋಲಿಂಗ್, ಕಿರುಕುಳಗಳು ತೀವ್ರಗೊಳ್ಳುತ್ತಿವೆ ಮತ್ತು ಸ್ತ್ರೀದ್ವೇಷ ಮತ್ತು ನಿಂದನೀಯ ಪ್ರೊಫೈಲ್‌ಗಳ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಾಧ್ಯಮ ವರದಿಯು ಹೇಳಿದೆ.
ಟ್ವಿಟರ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚುತ್ತಿದೆ ಮತ್ತು ಮೊದಲಿನಂತೆ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಟ್ವಿಟರ್ಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮ ತನಿಖೆಯು ಬಹಿರಂಗಪಡಿಸಿದೆ. ಸಿಬ್ಬಂದಿ ಪ್ರಕಾರ, ಉದ್ಯೋಗಿಗಳ ಸಾಮೂಹಿಕ ವಜಾದಿಂದ ಸಂಪೂರ್ಣ ಅವ್ಯವಸ್ಥೆ ಸೃಷ್ಟಿಯಾಗಿದೆ. ಒಬ್ಬ ಹೊಸ ಯಾವುದೇ ಪರಿಣತಿಯಿಲ್ಲದ ಉದ್ಯೋಗಿಯು ಈ ಹಿಂದೆ 20 ಜನ ಉದ್ಯೋಗಿಗಳು ಮಾಡುತ್ತಿರುವ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾನೆ. ಇದು ಸಾಕಷ್ಟು ಅಪಾಯಕ್ಕೆ ಅವಕಾಶ ನೀಡುತ್ತಿದೆ. ಇಂಥ ಸಂದರ್ಭದಲ್ಲಿ ತಪ್ಪುಗಳಾಗಬಹುದಾದ ಸಾಧ್ಯತೆಗಳು ಹೆಚ್ಚು ಎಂದು ಕಂಪ್ಯೂಟರ್ ಕೋಡಿಂಗ್ ಮಾಡುವ ಟ್ವಿಟರ್ ಎಂಜಿನಿಯರ್ ಒಬ್ಬರು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುವ ಗುರಿಯನ್ನು ಹೊಂದಿರುವ ಕಿರುಕುಳ ಅಭಿಯಾನಗಳು ಮತ್ತು ವಿದೇಶಿ ಪ್ರಭಾವದ ಕಾರ್ಯಾಚರಣೆಗಳನ್ನು ಪತ್ತೆ ಮಾಡುವ ಕೆಲಸವನ್ನೇ ನಿಲ್ಲಿಸಲಾಗಿದೆ. ಈ ಮುಂಚೆ ದಿನಕ್ಕೊಮ್ಮೆ ಇವನ್ನು ಟ್ವಿಟರ್ ಪ್ಲಾಟ್ಫಾರ್ಮ್ನಿಂದ ತೆಗೆದು ಹಾಕಲಾಗುತ್ತಿತ್ತು ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅತ್ಯಾಚಾರ ಸಂತ್ರಸ್ತರಿಗೆ ಕಿರುಕುಳ ನೀಡುವ ಖಾತೆಗಳು ಹೆಚ್ಚು ಸಕ್ರಿಯವಾಗಿವೆ. ಮಸ್ಕ್ ಒಡೆತನ ಪಡೆದುಕೊಂಡ ನಂತರ ಇಂಥ ಖಾತೆಗಳು ಮತ್ತೂ ಹೆಚ್ಚು ಸಕ್ರಿಯವಾಗಿವೆ. ಕಿರುಕುಳ ನೀಡುವ ಕೆಲ ಖಾತೆಗಳು ಮತ್ತೆ ಸಕ್ರಿಯವಾಗಿವೆ ಅಥವಾ ಅವನ್ನು ಮರುಸ್ಥಾಪಿಸಲಾಗಿದೆ ಎಂದು ವರದಿ ಹೇಳಿದೆ.
ಎಲೆಕ್ಟ್ರಿಕ್ ಕಾರು ಕಂಪನಿಯ ಎಂಜಿನಿಯರುಗಳು ಟ್ವಿಟರ್‌ನಲ್ಲಿ: ಮಸ್ಕ್ ತಮ್ಮ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದಿಂದ ಇಂಜಿನಿಯರ್‌ಗಳನ್ನು ಕರೆತಂದಿದ್ದು, ಈಗಾಗಲೇ ಇರುವ ಉದ್ಯೋಗಿಗಳ ಕೋಡ್ ಅನ್ನು ಮೌಲ್ಯಮಾಪನ ಮಾಡಿ ಯಾರನ್ನು ವಜಾಗೊಳಿಸಬೇಕೆಂದು ತಿಳಿಸುವ ಕೆಲಸವನ್ನು ಅವರಿಗೆ ವಹಿಸಿದ್ದಾರೆ. ಆದರೆ ಅಂಥ ಕೋಡ್ ಅರ್ಥಮಾಡಿಕೊಳ್ಳಲು ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತದೆ. ಮಸ್ಕ್ ಕಚೇರಿಯಲ್ಲಿ ಎಲ್ಲಿಗೆ ಹೋದರೂ ಕನಿಷ್ಠ ಇಬ್ಬರು ಅಜಾನುಬಾಹು ಅಂಗರಕ್ಷಕರು ಇರುತ್ತಾರೆ ಎಂದು ಉದ್ಯೋಗಿಯೊಬ್ಬರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಓಪನ್ ಸೋರ್ಸ್ ಆಗಲಿದೆ ಟ್ವಿಟರ್ ಅಲ್ಗಾರಿದಂ: ಮಸ್ಕ್ ಘೋಷಣೆ