ಲಾಸ್ ಏಂಜಲೀಸ್ : ಎಲೋನ್ ಮಸ್ಕ್ ಅವರ ಟ್ವಿಟರ್ಗೆ ಶೀಘ್ರದಲ್ಲೇ ಫೇಸ್ಬುಕ್ನಿಂದ ಪ್ರತಿಸ್ಪರ್ಧಿ ಆ್ಯಪ್ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಫೇಸ್‌ಬುಕ್ ಮಾಲೀಕತ್ವದ ಮೆಟಾ ಟ್ವಿಟರ್ ಮಾದರಿಯ ಆಪ್ಲಿಕೇಶನ್ ಲಾಂಚ್ ಮಾಡುವ ಬಗ್ಗೆ ಕಾರ್ಯನಿರತವಾಗಿದೆ. ಟೆಕ್ಸ್ಟ್ ಮಾದರಿಯ ಅಪ್ಡೇಟ್ಗಳನ್ನು ಹಂಚಿಕೊಳ್ಳಲು ನಾವು ಸ್ವತಂತ್ರ, ವಿಕೇಂದ್ರೀಕೃತ ಸಾಮಾಜಿಕ ನೆಟ್‌ವರ್ಕ್ ಒಂದನ್ನು ತಯಾರಿಸುತ್ತಿದ್ದೇವೆ ಎಂದು ಮೆಟಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್ಸ್ ಮತ್ತು ಸಾರ್ವಜನಿಕರು ತಮ್ಮ ಆಸಕ್ತಿಗಳ ಬಗ್ಗೆ ಸಮಯೋಚಿತ ಅಪ್ಡೇಟ್ಗಳನ್ನು ಹಂಚಿಕೊಳ್ಳಲು ಪ್ರತ್ಯೇಕ ಪ್ಲಾಟ್ಫಾರ್ಮ್ ಒಂದರ ಅಗತ್ಯವಿದೆ ಎಂಬುದು ನಮ್ಮ ಭಾವನೆಯಾಗಿದೆ ಎಂದು ಮೆಟಾ ಹೇಳಿದೆ.
ಮೆಟಾ ಹೊರತರಲಿರುವ ಟ್ವಿಟರ್ ಮಾದರಿಯ ಆ್ಯಪ್ ಗೆ P92 ಎಂದು ಸಾಂಕೇತಕವಾಗಿ (code name) ಹೆಸರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮೆಟಾದ ಹೊಸ ಆ್ಯಪ್, 2016 ರಲ್ಲಿ ಲಾಂಚ್ ಆಗಿರುವ ಟ್ವಿಟರ್ ಅನ್ನೇ ಹೋಲುವ ಮಾಸ್ಟೊಡಾನ್ ಸೋಶಿಯಲ್ ಮೀಡಿಯಾ ಆ್ಯಪ್ ಗೆ ಹೋಲಿಕೆಯಾಗಲಿದೆ ಮತ್ತು ಅದರೊಂದಿಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುವ ರೀತಿಯಲ್ಲಿರಲಿದೆ ಎಂದು ಹೇಳಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಮಾಸ್ಟೊಡಾನ್ ಜನಪ್ರಿಯತೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಟ್ವಿಟರ್ ಈಗ ಪೇಡ್ ಸಬ್ಸ್ಕ್ರಿಪ್ಷನ್ ಆರಂಭಿಸಿರುವುದು ತಿಳಿದ ವಿಷಯ. ಎಲೋನ್ ಮಸ್ಕ್ ಅವರ ಈ ಐಡಿಯಾದಿಂದಲೇ ಪ್ರೇರಣೆ ಪಡೆದಿರುವ ಮೆಟಾ ಕೂಡ ಕಳೆದ ತಿಂಗಳು ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಂ ಗಳಿಗೆ ಮೆಟಾ ವೆರಿಫೈಡ್ ಸಬ್ಸ್ಕ್ರಿಪ್ಷನ್ ಆರಂಭಿಸಿದೆ. ಇದು ಟ್ವಿಟರ್ ರೀತಿಯಲ್ಲಿಯೇ ಗ್ರಾಹಕರಿಗೆ ಬ್ಲೂ ಟಿಕ್ ನೀಡುತ್ತದೆ ಹಾಗೂ ಇದರೊಂದಿಗೆ ಕೆಲ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುತ್ತದೆ.
ವೆಬ್‌ನಲ್ಲಿ ಮೆಟಾ ವೆರಿಫೈಡ್ ಸಬ್ಸ್ಕ್ರಿಪ್ಷನ್ ದರ USD 11.99/ತಿಂಗಳು ಅಥವಾ Apple ನ iOS ನಲ್ಲಿ USD 14.99/ತಿಂಗಳು ಆಗಿದೆ. ಕಂಪನಿಯು ಆರಂಭದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಸಬ್ಸ್ಕ್ರಿಪ್ಷನ್ ಸೌಲಭ್ಯ ಆರಂಭಿಸಿದೆ. ಶೀಘ್ರದಲ್ಲೇ ಇನ್ನೂ ಹೆಚ್ಚಿನ ದೇಶಗಳಲ್ಲಿ ಈ ಸೇವೆಯನ್ನು ಆರಂಭಿಸುವುದಾಗಿ ಮೆಟಾದ ಅಧ್ಯಕ್ಷ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಟ್ವಿಟರ್ ಮಾದರಿಯ ಆ್ಯಪ್ ಪರಿಚಯಿಸಲು ಹೊರಟಿರುವ ಮೆಟಾದ ಕ್ರಮಕ್ಕೆ ಟ್ವಿಟರ್ ಸಿಇಓ ಎಲೋನ್ ಮಸ್ಕ್ ವ್ಯಂಗ್ಯವಾಡಿದ್ದಾರೆ. ಮೆಟಾ ಟ್ವಿಟರ್ ಅನ್ನು ಕಾಪಿ ಮಾಡುತ್ತಿದೆ ಎಂದು ಮಸ್ಕ್ ಹೇಳಿದ್ದು, ಅದು ಕಾಪಿ ಕ್ಯಾಟ್ ಕಂಪನಿಯಾಗಿದೆ ಎಂದು ಜರಿದಿದ್ದಾರೆ. ಮಸ್ಕ್ ಟ್ವಿಟರ್ನ ಒಡೆತನ ಹೊಂದಿದ ನಂತರ, ಅದೇ ಮಾದರಿಯ ಇತರ ಅನೇಕ ಆ್ಯಪ್ಗಳು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಮಾಸ್ಟೊಡಾನ್, ಪೋಸ್ಟ್ ಡಾಟ್ ನ್ಯೂಸ್ ಮತ್ತು ಟಿ2 ಅವುಗಳಲ್ಲಿ ಪ್ರಮುಖವಾಗಿವೆ.
ಈ ತಿಂಗಳ ಆರಂಭದಲ್ಲಿ, ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಅದರ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು 'ಬ್ಲೂಸ್ಕಿ' ಎಂಬ ಟ್ವಿಟರ್ಗೆ ಪರ್ಯಾಯ ಆ್ಯಪ್ ಒಂದನ್ನು ಪ್ರಾರಂಭಿಸುವುದರೊಂದಿಗೆ ಸಾಮಾಜಿಕ ಮಾಧ್ಯಮ ಕ್ಷೇತ್ರಕ್ಕೆ ಮರಳಿದ್ದಾರೆ.
ಇದನ್ನೂ ಓದಿ : ವಾಟ್ಸ್ಆ್ಯಪ್ ಫೀಚರ್ನಲ್ಲಿ ಹೊಸ ಬದಲಾವಣೆ: ಶೀಘ್ರದಲ್ಲೇ 21 ಹೊಸ ಎಮೋಜಿ ಬಿಡುಗಡೆ