ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ): ಎಲೋನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದಲ್ಲಿ ಅವರು ಟ್ವಿಟರ್ನಲ್ಲಿರುವ ಶೇ 75 ರಷ್ಟು ಸಿಬ್ಬಂದಿ ಕಡಿತಗೊಳಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ, ಹೀಗೆ ಸಾಮೂಹಿಕವಾಗಿ ಸಿಬ್ಬಂದಿ ವಜಾ ಮಾಡುವುದು ಬೇಜವಾಬ್ದಾರಿತನದ ಕ್ರಮವಾಗಲಿದೆ ಎಂದು ಟ್ವಿಟರ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಮಸ್ಕ್ 44 ಶತಕೋಟಿ ಡಾಲರ್ ಮೌಲ್ಯದ ಟ್ವಿಟರ್ ಸ್ವಾಧೀನತೆಯನ್ನು ಅಂತಿಮಗೊಳಿಸುವ ಗಡುವು ಸಮೀಪಿಸುತ್ತಿದೆ. ಈ ಸಮಯದಲ್ಲಿ ಕಂಪನಿಯ ಕೆಲ ಉದ್ಯೋಗಿಗಳು ಶೇ 75ರಷ್ಟು ಸಿಬ್ಬಂದಿ ವಜಾಗೊಳಿಸುವ ಪ್ರಸ್ತಾಪ ವಿರೋಧಿಸಿ ಮಸ್ಕ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಟ್ವಿಟರ್ನ ಶೇ 75ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸುವ ಮಸ್ಕ್ ಅವರ ಯೋಜನೆಯಿಂದ ಸಾಮಾಜಿಕ ಚರ್ಚೆಯ ವೇದಿಕೆ ಕಲ್ಪಿಸುವ ಟ್ವಿಟರ್ನ ಸಾಮರ್ಥ್ಯಕ್ಕೆ ಹಾನಿಯಾಗಲಿದೆ. ಇಂತಹದೊಂದು ಬೆದರಿಕೆಯಿಂದ ನಮ್ಮ ಬಳಕೆದಾರರು ಮತ್ತು ಗ್ರಾಹಕರು ಕಂಪನಿಯ ಮೇಲಿನ ನಂಬಿಕೆ ಕಳೆದುಕೊಳ್ಳಲಿದ್ದಾರೆ.
ಇದು ಕೆಲಸಗಾರರನ್ನು ಬಹಿರಂಗವಾಗಿಯೇ ಬೆದರಿಸುವ ಕ್ರಮವಾಗಲಿದೆ. ಸತತ ಕಿರುಕುಳ ಮತ್ತು ಬೆದರಿಕೆಗಳ ವಾತಾವರಣದಲ್ಲಿ ನಾವು ಸರಿಯಾಗಿ ಕೆಲಸ ಮಾಡಲಾರೆವು ಎಂದು ಪತ್ರದಲ್ಲಿ ಬರೆಯಲಾಗಿದೆ. ಪತ್ರವು ಕಂಪನಿಯ ಪ್ರಸ್ತುತ ಮತ್ತು ಭವಿಷ್ಯದ ನಾಯಕತ್ವಕ್ಕೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಹ ಒಳಗೊಂಡಿದೆ.
ಎಲ್ಲ ಕೆಲಸಗಾರರಿಗೆ ನ್ಯಾಯಯುತವಾದ ಬೇರ್ಪಡಿಕೆ ನೀತಿಗಳ ಜೊತೆಗೆ, ರಿಮೋಟ್ ಕೆಲಸ ಸೇರಿದಂತೆ ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಸೌಲಭ್ಯಗಳನ್ನು ಮುಂದುವರಿಸಬೇಕೆಂದು ಪತ್ರದಲ್ಲಿ ಬೇಡಿಕೆ ಇಡಲಾಗಿದೆ. ಕಡಿಮೆ ಮಾಡರೇಷನ್ ನೀತಿಯ ಪರವಾಗಿರುವ ಮಸ್ಕ್ ಅವರೊಂದಿಗೆ ಅದೇ ಕಾರಣಕ್ಕಾಗಿ ಕೆಲ ಉದ್ಯೋಗಿಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಹೊಸ ನಾಯಕತ್ವವು ಕಾರ್ಮಿಕರ ವಿರುದ್ಧ ಅವರ ಜನಾಂಗ, ಲಿಂಗ, ಅಂಗವೈಕಲ್ಯ, ಲೈಂಗಿಕ ದೃಷ್ಟಿಕೋನ ಅಥವಾ ರಾಜಕೀಯ ನಂಬಿಕೆಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ನಾವು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕಂಪನಿಯನ್ನು ಮಸ್ಕ್ ಸ್ವಾಧೀನಪಡಿಸಿಕೊಳ್ಳಲಿ ಅಥವಾ ಬಿಡಲಿ, ಮುಂಬರುವ ದಿನಗಳಲ್ಲಿ ಟ್ವಿಟರ್ನಲ್ಲಿ ಉದ್ಯೋಗ ಕಡಿತಗಳಾಗುವುದು ಖಚಿತ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ವಿಡಿಯೋ ವೀಕ್ಷಣೆ ಉತ್ತಮವಾಗಿಸಲು 2 ಹೊಸ ವೈಶಿಷ್ಟ್ಯತೆ ಪರಿಚಯಿಸಿದ ಟ್ವಿಟರ್