ನವದೆಹಲಿ: ಎಲೋನ್ ಮಸ್ಕ್ ಈಗಲೂ ಟ್ವಿಟರ್ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಸೇಲ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಹಲವಾರು ನೌಕರರನ್ನು ಕಳೆದ ವಾರವಷ್ಟೇ ಹೊರಹಾಕಲಾಗಿತ್ತು. ಮಸ್ಕ್ಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿದ್ದ ಓರ್ನ ನೌಕರನ್ನೂ ಹೀಗೆ ಹೊರಹಾಕಿದ ನೌಕರರಲ್ಲಿ ಸೇರಿದ್ದಾರೆ. ಇವರು ಟ್ವಿಟರ್ನ ಜಾಹೀರಾತು ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಮಸ್ಕ್ ಕಡಿಮೆಯೆಂದರೂ ಮೂರು ಹಂತಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನಷ್ಟು ನೌಕರರನ್ನು ವಜಾ ಮಾಡುವುದಿಲ್ಲ ಎಂದು ನವೆಂಬರ್‌ನಲ್ಲಿ ಮಸ್ಕ್ ವಾಗ್ದಾನ ಮಾಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಸ್ಕ್ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮೊದಲ ಹಂತದ ಕಡಿತದಲ್ಲಿ ಟ್ವಿಟರ್ 7,500 ಉದ್ಯೋಗಿಗಳನ್ನು ವಜಾ ಮಾಡಿತ್ತು.
ಟ್ವಿಟರ್ ಈಗ ಎಂಜಿನಿಯರಿಂಗ್ ಮತ್ತು ಸೇಲ್ಸ್ ವಿಭಾಗದಲ್ಲಿ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದೆ ಎಂದು ರಿಪೋರ್ಟಿಂಗ್ ಉದ್ಯೋಗಿಗಳ ಜೊತೆ ನಡೆಸಿದ ಸಭೆಯಲ್ಲಿ ಮಸ್ಕ್ ಹೇಳಿದ್ದರು. ತಮಗೆ ಗೊತ್ತಿರುವವರನ್ನು ಕಂಪನಿಗೆ ರೆಫರ್ ಮಾಡುವಂತೆಯೂ ಅವರು ಹೇಳಿದ್ದರು. ಇಷ್ಟಾದರೂ ಮಸ್ಕ್ ಆಗಾಗ ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಮಾತ್ರ ಸತ್ಯ. ಭಾರತದಲ್ಲಿನ ತನ್ನ ಮೂರರ ಪೈಕಿ ಎರಡು ಕಚೇರಿಗಳನ್ನು ಟ್ವಿಟರ್ ಈಗಾಗಲೇ ಮುಚ್ಚಿದೆ. ಇಲ್ಲಿ ಉಳಿಸಿಕೊಳ್ಳಲಾದ ಕೆಲವೇ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಟ್ವಿಟರ್ ನವದೆಹಲಿ ಮತ್ತು ಮುಂಬೈನಲ್ಲಿ ತನ್ನ ಕಚೇರಿಗಳನ್ನು ಮುಚ್ಚಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಮಸ್ಕ್ ಭಾರತದಲ್ಲಿನ ಶೇ 90 ಕ್ಕಿಂತ ಹೆಚ್ಚು (ಸುಮಾರು 200) ಉದ್ಯೋಗಿಗಳನ್ನು ವಜಾಗೊಳಿಸಿದ್ದರು.
ಒಂದು ವಾರದೊಳಗೆ ಟ್ವಿಟರ್ನ ಮುಖ್ಯ ಫೀಡ್‌ನಲ್ಲಿ ಜಾಹೀರಾತುಗಳನ್ನು ತೋರಿಸುವ ವಿಧಾನವನ್ನು ಸುಧಾರಿಸುವಂತೆ ಮಸ್ಕ್ ಆಂತರಿಕವಾಗಿ ಉದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ಟ್ವಿಟರ್ ತನ್ನ ಅಲ್ಗಾರಿದಮ್ ಅನ್ನು 'ಓಪನ್ ಸೋರ್ಸ್' ಮಾಡಲಿದೆ ಮತ್ತು ಅದನ್ನು ಶೀಘ್ರವಾಗಿ ಇನ್ನಷ್ಟು ಉತ್ತಮಗೊಳಿಸಲಿದೆ ಎಂದು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಬುಧವಾರ ಹೇಳಿದ್ದಾರೆ. ನೀವು ಏನೇ ಹೇಳಿ, ಲಾಭವನ್ನೇ ಮಾಡದ ಕಂಪನಿಯನ್ನು ನಾನು 44 ಬಿಲಿಯನ್ ಡಾಲರ್ಗೆ ಖರೀದಿಸಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಸರಿ ಹಾಗಾದರೆ ಅದನ್ನು ಓಪನ್ ಸೋರ್ಸ್ ಮಾಡಿ. ನಿಜವಾಗಿಯೂ ಅದು ಚೆನ್ನಾಗಿರುತ್ತೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಮಸ್ಕ್ ಟ್ವೀಟ್ ಗೆ ಪ್ರತಿಕ್ರಿಯೆ ಬರೆದಿದ್ದಾರೆ. ಇದಕ್ಕೆ ಮರಳಿ ಪ್ರತಿಕ್ರಿಯಿಸಿದ ಮಸ್ಕ್, ಮುಂದಿನ ವಾರ ನಮ್ಮ ಅಲ್ಗಾರಿದಂ ಓಪನ್ ಸೋರ್ಸ್ ಆದಾಗ ನಿರಾಸೆಯಾಗಲು ಸಿದ್ಧವಾಗಿರಿ. ಆದರೆ ಬಹಳ ಬೇಗ ನಾವು ಅದನ್ನು ಸುಧಾರಿಸಲಿದ್ದೇವೆ. ತಮಗೆ ತುಂಬಾ ಹೊಂದಾಣಿಕೆಯಾಗುವವರೊಂದಿಗೆ (near match) ಸಂಯೋಜಿತವಾಗುವಂತೆ ಅಲ್ಗಾರಿದಂ ಅವಕಾಶ ನೀಡಲಿದೆ ಎಂದು ಮಸ್ಕ್ ಕಳೆದ ವಾರ ಘೋಷಣೆ ಮಾಡಿದ್ದರು. ಕಳೆದ ವರ್ಷ ಎಲೋನ್ ಮಸ್ಕ್ ಟ್ವಿಟರ್ ಅನ್ನು 44 ಶತಕೋಟಿ ಡಾಲರ್ಗೆ ಖರೀದಿಸಿದ್ದರು. ಇದಕ್ಕಾಗಿ ಬಂಡವಾಳ ಸಂಗ್ರಹಿಸಲು ಮೋರ್ಗನ್ ಸ್ಟಾನ್ಲಿ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಕಾರ್ಪ್ ಸೇರಿದಂತೆ ಹಲವಾರು ಬ್ಯಾಂಕ್‌ಗಳ ಸಮೂಹದಿಂದ ಅಕ್ಟೋಬರ್‌ನಲ್ಲಿ ಮಸ್ಕ್ 13 ಬಿಲಿಯನ್ ಡಾಲರ್ ಸಾಲ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 'ವೈಫ್ ಗಿವಿಂಗ್' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್ ಮಾಡ್ತಿದ್ದ ಪತಿ!