ಟೊರೊಂಟೊ : ಥಂಬ್ಸ್ ಅಪ್ ಎಮೋಜಿಯು ಪರಸ್ಪರ ಒಪ್ಪಂದಕ್ಕೆ ಸಮನಾಗಿರುತ್ತದೆ ಎಂದು ಕೆನಡಾ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ. ಟೆಕ್ಸ್ಟ್ ಮೆಸೇಜಿಗೆ ಥಂಬ್ಸ್ ಅಪ್ ಚಿತ್ರದೊಂದಿಗೆ ಪ್ರತಿಕ್ರಿಯಿಸಿದ ನಂತರ ಧಾನ್ಯ ಖರೀದಿದಾರರಿಗೆ ಧಾನ್ಯವನ್ನು ತಲುಪಿಸದಿದ್ದಕ್ಕಾಗಿ 82,000 ಡಾಲರ್ಗಿಂತ ಹೆಚ್ಚು ದಂಡ ಪಾವತಿಸಲು ರೈತನೊಬ್ಬನಿಗೆ ಅವರು ಆದೇಶಿಸಿದರು.
ಧಾನ್ಯ ಖರೀದಿದಾರ ಕೆಂಟ್ ಮಿಕ್ಲ್‌ಬರೋ ಎಂಬುವರು ರೈತನಿಗೆ ಟೆಕ್ಸ್ಟ್ ಮೆಸೇಜ್ ಕಳುಹಿಸಿ, ಪ್ರತಿ ಬುಶೆಲ್ಗೆ 17 ಡಾಲರ್ ದರದಲ್ಲಿ ತನಗೆ 86 ಟನ್ ಧಾನ್ಯ ಬೇಕಾಗಿವೆ ಎಂದು ಹೇಳಿದ್ದರು. ಇದರ ನಂತರ ಅವರು ರೈತನೊಂದಿಗೆ ಮಾತನಾಡಿದ್ದರು ಹಾಗೂ ಅದರ ನಂತರ ಧಾನ್ಯ ಕಳುಹಿಸುವ ಒಪ್ಪಂದದ ಚಿತ್ರವನ್ನು ಸಹ ಕಳುಹಿಸಿದ್ದರು. ಧಾನ್ಯ ಪೂರೈಕೆ ಒಪ್ಪಂದವನ್ನು ದಯವಿಟ್ಟು ಅಂಗೀಕರಿಸಿ ಎಂದು ಅವರು ರೈತನಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರೈತ ಆಚ್ಟರ್ ಥಂಬ್ಸ್ ಅಪ್ ಚಿತ್ರವನ್ನು ಕಳುಹಿಸಿದ್ದರು.
ಆದರೆ ಧಾನ್ಯವನ್ನು ಪೂರೈಕೆ ಮಾಡುವ ಸಮಯ ಬಂದಾಗ ಧಾನ್ಯ ವಿತರಣೆಯಾಗಲಿಲ್ಲ ಮತ್ತು ಬೆಳೆಗೆ ಬೆಲೆ ಹೆಚ್ಚಾಗಿದೆ ಎಂದು ರೈತ ವಾದಿಸಿದ. ಅಲ್ಲದೆ ತನಗೆ ಮೆಸೇಜಿನಲ್ಲಿ ಒಪ್ಪಂದ ಪ್ರತಿ ಬಂದಿದೆ ಎಂದಷ್ಟೇ ನಾನು ಥಂಬ್ಸ್ ಅಪ್ ಕಳುಹಿಸಿದ್ದು. ಇಡೀ ಒಪ್ಪಂದವನ್ನು ಓದಲು ನನಗೆ ಸಮಯವಿರಲಿಲ್ಲ. ಟೆಕ್ಟ್ಸ್ ಮೆಸೇಜ್ ಬಂದಿದೆ ಎಂಬುದನ್ನು ಖಾತರಿ ಪಡಿಸುವ ಸಲುವಾಗಿ ಮಾತ್ರ ನಾನು ಥಂಬ್ಸ್ ಅಪ್ ಕಳುಹಿಸಿದ್ದೆ ಎಂದು ರೈತ ವಾದಿಸತೊಡಗಿದ್ದ.
"ಥಂಬ್ಸ್ ಅಪ್ ಎಮೋಜಿಗಳು ಸಹಿ ಮಾಡಿದ ರೀತಿಯಲ್ಲಿಯೇ ಒಪ್ಪಂದ ಖಾತರಿ ಪಡಿಸುತ್ತವೆ. ಹೀಗಾಗಿ ರೈತರು ಒಪ್ಪಂದವನ್ನು ಉಲ್ಲಂಘಿಸಿದ್ದಾರೆ" ಎಂದು ನ್ಯಾಯಮೂರ್ತಿ ತಿಮೋತಿ ಕೀನ್ ಹೇಳಿದರು. "ಈ ನ್ಯಾಯಾಲಯವು ಥಂಬ್ಸ್ ಅಪ್ ಎಮೋಜಿಯು ಡಾಕ್ಯುಮೆಂಟ್‌ಗೆ 'ಸಹಿ' ಮಾಡಲು ಸಾಂಪ್ರದಾಯಿಕವಲ್ಲದ ಸಾಧನವಾಗಿದೆ ಎಂದು ಒಪ್ಪಿಕೊಳ್ಳುತ್ತದೆ. ಆದರೆ ಈ ಸಂದರ್ಭಗಳಲ್ಲಿ ಇದು 'ಸಹಿ'ಯ ಎರಡು ಉದ್ದೇಶಗಳನ್ನು ತಿಳಿಸಲು ಮಾನ್ಯವಾದ ಮಾರ್ಗವಾಗಿದೆ" ಎಂದು ನ್ಯಾಯಾಧೀಶ ಕೀನ್ ಹೇಳಿದರು.
"ಈ ನ್ಯಾಯಾಲಯವು ತಂತ್ರಜ್ಞಾನ ಮತ್ತು ಸಾಮಾನ್ಯ ಬಳಕೆಯ ಏರಿಳಿತಗಳನ್ನು ತಡೆಯಲು ಪ್ರಯತ್ನಿಸುವುದಿಲ್ಲ (ಅಥವಾ ಮಾಡಬಾರದು) - ಇದು ಕೆನಡಾ ಸಮಾಜದಲ್ಲಿ ಹೊಸ ರಿಯಾಲಿಟಿ ಎಂದು ತೋರುತ್ತದೆ ಮತ್ತು ಎಮೋಜಿಗಳ ಬಳಕೆಯಿಂದ ಉದ್ಭವಿಸಬಹುದಾದ ಹೊಸ ಸವಾಲುಗಳನ್ನು ಎದುರಿಸಲು ನ್ಯಾಯಾಲಯಗಳು ಸಿದ್ಧವಾಗಿರಬೇಕು" ಎಂದು ಕೀನ್ ತಿಳಿಸಿದರು.
ಎಲ್ಲಾ ತಲೆಮಾರುಗಳ ಜನ ಎಮೋಜಿಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಬಳಸುತ್ತಿದ್ದಾರೆ. ಇವುಗಳು ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವಂತೆ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಟೈಪ್ ಮಾಡದೆಯೇ ಚಾಟಿಂಗ್ ಅನುಭವವನ್ನು ಹೆಚ್ಚಿಸುತ್ತವೆ. ಸಾವಿರಕ್ಕೂ ಹೆಚ್ಚು ಎಮೋಜಿಗಳೊಂದಿಗೆ, ಅವೆಲ್ಲವನ್ನೂ ಮತ್ತು ಅವುಗಳ ನಿಖರ ಬಳಕೆಯ ಸಂದರ್ಭಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವಿಲ್ಲವಾದರೂ ಪ್ರಮುಖ ಮತ್ತು ಜನಪ್ರಿಯವಾದವುಗಳನ್ನು ತಿಳಿದುಕೊಳ್ಳುವುದು ಸಾಧ್ಯ. ಸರಳವಾಗಿ ಹೇಳುವುದಾದರೆ, ಎಮೋಜಿಗಳು ಮಾನವರ ಭಾವನೆಗಳು, ಜೀವಿಗಳು, ವಸ್ತುಗಳು ಮತ್ತು ಕೆಲವು ಚಿಹ್ನೆಗಳನ್ನು ಬಿಂಬಿಸುವ ಚಿತ್ರಗಳಾಗಿವೆ.
ಇದನ್ನೂ ಓದಿ : ರೂಪಾಯಿಯ ಅಂತಾರಾಷ್ಟ್ರೀಕರಣ; ಡಾಲರ್ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ ದೇಸಿ ಕರೆನ್ಸಿ