ಚೆನ್ನೈ: ಬಾಹ್ಯಾಕಾಶದಲ್ಲಿ ತನ್ನ ಇಂಧನ ಕೋಶವನ್ನು (fuel cell) ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ತಿಳಿಸಿದೆ. ಜನವರಿ 1 ರಂದು ಪಿಎಸ್ಎಲ್ವಿ-ಸಿ 58 ರಾಕೆಟ್ ಮೂಲಕ ಉಡಾವಣೆಯಾದ ತನ್ನ ಕಕ್ಷೆಯ ಪೊಯೆಮ್ 3 ಪ್ಲಾಟ್ಫಾರ್ಮ್ನಲ್ಲಿ 100 ಡಬ್ಲ್ಯೂ ಕ್ಲಾಸ್ ಪಾಲಿಮರ್ ಎಲೆಕ್ಟ್ರೋಲೈಟ್ ಮೆಂಬ್ರೇನ್ ಫ್ಯೂಯಲ್ ಸೆಲ್ ಆಧಾರಿತ ಪವರ್ ಸಿಸ್ಟಮ್ (ಎಫ್ಸಿಪಿಎಸ್) ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ.
ಬಾಹ್ಯಾಕಾಶದಲ್ಲಿ ಪಾಲಿಮರ್ ಎಲೆಕ್ಟ್ರೋಲೈಟ್ ಮೆಂಬ್ರೇನ್ ಫ್ಯೂಯಲ್ ಸೆಲ್ ಕಾರ್ಯಾಚರಣೆಯನ್ನು ನಿರ್ಣಯಿಸುವುದು ಮತ್ತು ಭವಿಷ್ಯದ ಕಾರ್ಯಾಚರಣೆಗಳಿಗೆ ವ್ಯವಸ್ಥೆಗಳ ವಿನ್ಯಾಸಕ್ಕೆ ಅನುಕೂಲವಾಗುವಂತೆ ಡೇಟಾ ಸಂಗ್ರಹಿಸುವುದು ಪ್ರಯೋಗದ ಉದ್ದೇಶವಾಗಿದೆ ಎಂದು ಇಸ್ರೋ ತಿಳಿಸಿದೆ. ಅಲ್ಪಾವಧಿಯ ಈ ಪರೀಕ್ಷೆಯ ಸಮಯದಲ್ಲಿ, ಹೆಚ್ಚಿನ ಒತ್ತಡದ ಟ್ಯಾಂಕ್ಗಳಲ್ಲಿ ಪಿಒಎಂನಲ್ಲಿ ಸಂಗ್ರಹಿಸಲಾದ ಹೈಡ್ರೋಜನ್ ಮತ್ತು ಆಮ್ಲಜನಕ ಅನಿಲಗಳಿಂದ 180 ವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
"ಇದು ವಿದ್ಯುತ್ ವ್ಯವಸ್ಥೆಯ ಭಾಗವಾಗಿರುವ ವಿವಿಧ ಸ್ಥಿರ ಮತ್ತು ಕ್ರಿಯಾತ್ಮಕ ವ್ಯವಸ್ಥೆಗಳ (static and dynamic systems) ಕಾರ್ಯಕ್ಷಮತೆಯ ಬಗ್ಗೆ ಮಹತ್ವದ ಡೇಟಾ ಒದಗಿಸಿದೆ" ಎಂದು ಇಸ್ರೋ ಹೇಳಿದೆ. ದಕ್ಷತೆಯಿಂದ ಕಾರ್ಯಾಚರಣೆಗಳಿಗೆ ಶಕ್ತಿ ತುಂಬುವ ಮತ್ತು ನೀರನ್ನು ಮಾತ್ರ ಹೊರಸೂಸುವ ಈ ಇಂಧನ ಕೋಶಗಳು ಬಾಹ್ಯಾಕಾಶ ಆವಾಸಸ್ಥಾನಗಳಲ್ಲಿ ವಿದ್ಯುತ್ ಉತ್ಪಾದನೆಯ ಮೂಲವಾಗಲಿವೆ.
ಹೈಡ್ರೋಜನ್ ಇಂಧನ ಕೋಶಗಳು ಶುದ್ಧ ನೀರು ಮತ್ತು ಶಾಖದೊಂದಿಗೆ ಹೈಡ್ರೋಜನ್ ಮತ್ತು ಆಮ್ಲಜನಕ ಅನಿಲಗಳಿಂದ ನೇರವಾಗಿ ವಿದ್ಯುತ್ ಉತ್ಪಾದಿಸುತ್ತವೆ ಎಂದು ಇಸ್ರೋ ಹೇಳಿದೆ. ಇದೊಂದು ವಿದ್ಯುತ್ ಜನರೇಟರ್ ಆಗಿದ್ದು, ಸಾಂಪ್ರದಾಯಿಕ ಜನರೇಟರ್ ಗಳಲ್ಲಿ ಬಳಸಲಾಗುವ ದಹನ ಪ್ರತಿಕ್ರಿಯೆಗಳಿಗೆ ಬದಲಾಗಿ ಬ್ಯಾಟರಿಗಳಲ್ಲಿರುವಂತೆ ವಿದ್ಯುತ್ ರಾಸಾಯನಿಕ ತತ್ವಗಳ ಮೇಲೆ ಇದು ಕಾರ್ಯನಿರ್ವಹಿಸುತ್ತದೆ.
ಯಾವುದೇ ಮಧ್ಯಂತರ ಹಂತವಿಲ್ಲದೆ ಇಂಧನಗಳಿಂದ ನೇರವಾಗಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವು ಇವುಗಳನ್ನು ಬಹಳ ಪರಿಣಾಮಕಾರಿಯಾಗಿಸುತ್ತದೆ. ನೀರು ಏಕೈಕ ಉಪ ಉತ್ಪನ್ನವಾಗಿರುವುದರಿಂದ, ಅವು ಸಂಪೂರ್ಣವಾಗಿ ಹೊರಸೂಸುವಿಕೆ ಮುಕ್ತವಾಗಿವೆ. ಹೀಗಾಗಿ ಮಾನವರನ್ನು ಒಳಗೊಂಡ ಬಾಹ್ಯಾಕಾಶ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇವು ಸೂಕ್ತ ಇಂಧನ ಮೂಲಗಳಾಗಲಿವೆ. ಬಾಹ್ಯಾಕಾಶದಲ್ಲಿ ವಿದ್ಯುತ್ ಶಕ್ತಿ, ನೀರು ಮತ್ತು ಶಾಖ ಅತ್ಯಗತ್ಯವಾಗಿರುತ್ತವೆ. ಈ ಅಗತ್ಯಗಳನ್ನು ಪೂರೈಸಲು ಇಂಧನ ಕೋಶದ ಒಂದೇ ವ್ಯವಸ್ಥೆಯು ಸಾಕಾಗಲಿದೆ ಎಂದು ಇಸ್ರೋ ಹೇಳಿದೆ.
ಇಂಧನ ಕೋಶಗಳು ಗಮನಾರ್ಹ ಸಾಮಾಜಿಕ ಅನ್ವಯಿಕ ಸಾಮರ್ಥ್ಯವನ್ನು ಸಹ ಹೊಂದಿವೆ. ಇಂದು ಬಳಕೆಯಲ್ಲಿರುವ ವಿವಿಧ ರೀತಿಯ ವಾಹನಗಳ ಎಂಜಿನ್ ಗಳನ್ನು ಬದಲಾಯಿಸಲು ಮತ್ತು ಸ್ಟ್ಯಾಂಡ್ ಬೈ ಪವರ್ ಸಿಸ್ಟಮ್ ಗಳಿಗೆ ಶಕ್ತಿ ತುಂಬಲು ಅವುಗಳನ್ನು ಅತ್ಯಂತ ಸೂಕ್ತ ಪರಿಹಾರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : 2023ರಲ್ಲಿ ಭಾರತದಲ್ಲಿ 950 ಟೆಕ್ ಸ್ಟಾರ್ಟಪ್ ಆರಂಭ