ವಾಷಿಂಗ್ಟನ್ : ಅಮೆರಿಕದಲ್ಲಿ ಭಾರತೀಯ ಮೂಲದವರ ಸಾಧನೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಏಜೆನ್ಸಿಯ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಭವ್ಯಾ ಲಾಲ್ ಆಯ್ಕೆಯಾಗಿದ್ದಾರೆ.
ಭವ್ಯಾ ಲಾಲ್ ಜೊತೆಗೆ ನಾಸಾದ ಅಡಿಯಲ್ಲಿ ಬರುವ ಹಲವಾರು ಹುದ್ದೆಗಳಿಗೆ ಹಲವರನ್ನು ನೇಮಕ ಮಾಡಲಾಗಿದೆ. ಫಿಲಿಪ್ ಥಾಂಪ್ಸನ್ ಶ್ವೇತ ಭವನದ ಮಾಹಿತಿದಾರರಾಗಿ, ಅಲಿಷಿಯಾ ಬ್ರೌನ್ ಅಂತರ್ ಸರ್ಕಾರಿ ವ್ಯವಹಾರಗಳ ಮತ್ತು ಶಾಸಕಾಂಗ ಕಚೇರಿಯ ಆಡಳಿತ ಸಹಾಯಕರಾಗಿ ಮತ್ತು ಮಾರ್ಕ್ ಎಟ್ಕಿಂಡ್ ಏಜೆನ್ಸಿಯ ಸಂವಹನ ಕಚೇರಿಯ ಆಡಳಿತ ಸಹಾಯಕರಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ:2013ರ ಎಟಿಎಮ್ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್ಗೆ ಶಿಕ್ಷೆ ಪ್ರಮಾಣ ಪ್ರಕಟ
ಈ ಬಗ್ಗೆ ನಾಸಾ ಅಧಿಕೃತ ಹೇಳಿಕೆ ನೀಡಿದ್ದು, ಜಾಕಿ ಮೆಕ್ ಗಿನ್ನೆಸ್ ಅವರನ್ನು ನಾಸಾದ ಮಾಧ್ಯಮ ಕಾರ್ಯದರ್ಶಿಯನ್ನಾಗಿ ಹಾಗೂ ರೀಗನ್ ಹಂಟರ್ ಅವರನ್ನು ಅಂತರ್ ಸರ್ಕಾರಿ ವ್ಯವಹಾರಗಳ ಮತ್ತು ಶಾಸಕಾಂಗ ಕಚೇರಿಯ ವಿಶೇಷ ಸಹಾಯಕರನ್ನಾಗಿ ನೇಮಕ ಮಾಡಲಾಗಿದೆ.
ಭವ್ಯಾ ಲಾಲ್ ಎಂಜಿನಿಯರಿಂಗ್ ಮತ್ತು ಸ್ಪೇಸ್ ಟೆಕ್ನಾಲಜಿಯಲ್ಲಿ ಅನುಭವ ಹೊಂದಿದ್ದು, 2005ರಿಂದ ಡಿಫೆನ್ಸ್ ಅನಾಲಿಸಿಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪಾಲಿಸಿ ಇನ್ಸ್ಟಿಟ್ಯೂಟ್(ಎಸ್ಟಿಪಿಐ)ನ ಸಂಶೋಧನಾ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಭವ್ಯಾ ಲಾಲ್ ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿ ಮತ್ತು ನ್ಯಾಷನಲ್ ಸ್ಪೇಸ್ ಕೌನ್ಸಿಲ್ಗೆ ಹಾಗೂ ನಾಸಾ ಸೇರಿದಂತೆ ಇತರ ಬಾಹ್ಯಾಕಾಶ ಸಂಬಂಧಿ ಸಂಘಟನೆಗಳಿಗೆ ವಿಶ್ಲೇಷಕರಾಗಿ ಕೆಲಸ ಮಾಡಲಿದ್ದಾರೆ.
ಈಗ ಸುಮಾರು 5 ಬಾಹ್ಯಾಕಾಶ ಸಂಬಂಧಿ ವಿಭಾಗಗಳಲ್ಲಿ ಭವ್ಯಾ ಲಾಲ್ ಕಾರ್ಯ ನಿರ್ವಹಿಸಲಿದ್ದು, ಈ ಕಚೇರಿಗಳು ಅಮೆರಿಕದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿವೆ.