ನವದೆಹಲಿ : ಕಳೆದೊಂದು ದಶಕದಲ್ಲಿ ಅಮೆರಿಕದ ಆ್ಯಪಲ್ ವಿಶ್ವಾದ್ಯಂತ 210 ಕೋಟಿ ಐಫೋನ್ಗಳನ್ನು ಮಾರಾಟ ಮಾಡಿದೆ. ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಸ್ಯಾಮ್ಸಂಗ್ ಇದೇ ಅವಧಿಯಲ್ಲಿ ಮಾರಾಟ ಮಾಡಿದ ಫೋನ್ಗಳ ಸಂಖ್ಯೆಗಿಂತ ಇದು 100 ಕೋಟಿ ಕಡಿಮೆಯಾಗಿದೆ. ಆದಾಗ್ಯೂ, ಸ್ಯಾಮ್ಸಂಗ್ನ ವಾರ್ಷಿಕ ರಫ್ತು 10 ವರ್ಷಗಳಲ್ಲಿ ಶೇಕಡಾ 18 ರಷ್ಟು ಕುಸಿದಿದ್ದರೆ, ಆ್ಯಪಲ್ನ ರಫ್ತು ಶೇಕಡಾ 46 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಆ್ಯಪಲ್ ಮತ್ತು ಸ್ಯಾಮ್ಸಂಗ್ನ ಕಾರ್ಪೊರೇಟ್ ಸಮರ 13 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಅಂದಿನಿಂದ, ವಿಶ್ವದ ಎರಡು ಟೆಕ್ ದಿಗ್ಗಜ ಕಂಪನಿಗಳು ವಿಶ್ವದ ಅತಿದೊಡ್ಡ ಸ್ಮಾರ್ಟ್ಫೋನ್ ಕಂಪನಿಯಾಗಲು ಪೈಪೋಟಿ ನಡೆಸುತ್ತಿವೆ. ಎರಡೂ ಕಂಪನಿಗಳು ಸರಿಸುಮಾರು 25 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೂ ಅಂಕಿಅಂಶಗಳ ಪ್ರಕಾರ, ಕಳೆದ ದಶಕದಲ್ಲಿ ಎರಡೂ ಕಂಪನಿಗಳ ಒಟ್ಟು ಮಾರಾಟದ ವ್ಯತ್ಯಾಸವು ದೊಡ್ಡದಾಗಿದೆ.
ಸ್ಟ್ಯಾಟಿಸ್ಟಾ ಮತ್ತು ಐಡಿಸಿ ಅಂಕಿಅಂಶಗಳ ಪ್ರಕಾರ, 2013 ಮತ್ತು 2022 ರ ನಡುವೆ, ಆ್ಯಪಲ್ ವಿಶ್ವಾದ್ಯಂತ 207 ಕೋಟಿ ಐಫೋನ್ಗಳನ್ನು ಮಾರಾಟ ಮಾಡಿದೆ. 2015 ಮತ್ತು 2021 ರಲ್ಲಿ ಆ್ಯಪಲ್ ದಾಖಲೆ ಸಂಖ್ಯೆಯ ಫೋನ್ಗಳನ್ನು ಮಾರಾಟ ಮಾಡಿದೆ. 2023 ರ ಮೊದಲಾರ್ಧದಲ್ಲಿ ಯುಎಸ್ ಟೆಕ್ ದೈತ್ಯ ಆ್ಯಪಲ್ ಮತ್ತೆ 97.7 ಕೋಟಿ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿದೆ. ಇದನ್ನು ಸೇರಿಸಿದರೆ 10 ವರ್ಷಗಳಲ್ಲಿ ಐಫೋನ್ ಮಾರಾಟ ಸಂಖ್ಯೆ 216 ಕೋಟಿಗೆ ಹೆಚ್ಚಾಗಿದೆ.
ಇನ್ನು ಸ್ಯಾಮ್ಸಂಗ್ ಬಗ್ಗೆ ನೋಡುವುದಾದರೆ, ಸ್ಯಾಮ್ಸಂಗ್ 2013 ರ ಮೊದಲ ತ್ರೈಮಾಸಿಕ ಮತ್ತು 2023 ರ ಎರಡನೇ ತ್ರೈಮಾಸಿಕದ ನಡುವೆ 308 ಕೋಟಿ ಸ್ಮಾರ್ಟ್ಪೋನ್ಗಳನ್ನು ಮಾರಾಟ ಮಾಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಆದಾಗ್ಯೂ, ವಾರ್ಷಿಕ ಮಾರಾಟ ಅಂಕಿಅಂಶಗಳು ಆಸಕ್ತಿದಾಯಕವಾಗಿವೆ. ಸ್ಯಾಮ್ಸಂಗ್ ಒಟ್ಟು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದರೂ, ಅದರ ವಾರ್ಷಿಕ ಸ್ಮಾರ್ಟ್ಪೋನ್ ಮಾರಾಟ ಕಳೆದ 10 ವರ್ಷಗಳಲ್ಲಿ ಶೇಕಡಾ 18 ರಷ್ಟು ಕುಸಿದಿದೆ.
ಮತ್ತೊಂದೆಡೆ, ಆ್ಯಪಲ್ನ ರಫ್ತುಗಳು ಈ ಅವಧಿಯಲ್ಲಿ ಶೇಕಡಾ 46 ರಷ್ಟು ಏರಿಕೆಯಾಗಿದ್ದು, 153 ಕೋಟಿಯಿಂದ 225 ಕೋಟಿಗೆ ಏರಿಕೆಯಾಗಿದೆ. "ಕಳೆದ ದಶಕದಲ್ಲಿ ಒಟ್ಟು ಮಾರಾಟದಲ್ಲಿ ಆ್ಯಪಲ್ ಸ್ಯಾಮ್ಸಂಗ್ಗಿಂತ ಹಿಂದೆ ಇದ್ದರೂ ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾಗಿ ಮಾರ್ಪಟ್ಟಿದೆ" ಎಂದು ವರದಿ ಹೇಳಿದೆ.
ಜುಲೈ ವೇಳೆಗೆ ಆ್ಯಪಲ್ ಐಫೋನ್ ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಶೇಕಡಾ 28.3 ರಷ್ಟು ಪಾಲನ್ನು ಹೊಂದಿತ್ತು, ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಶೇಕಡಾ 27.5 ರಷ್ಟಿತ್ತು. ಮತ್ತೊಂದೆಡೆ, ಸ್ಯಾಮ್ಸಂಗ್ನ ಮಾರುಕಟ್ಟೆ ಪಾಲು ಕಳೆದ ತಿಂಗಳು ಶೇಕಡಾ 24.22 ರಷ್ಟಿತ್ತು. ಇದು ಜುಲೈ 2022 ರಲ್ಲಿ ಶೇಕಡಾ 28.17 ರಷ್ಟಿತ್ತು. ಶಿಯೋಮಿ, ವಿವೋ ಮತ್ತು ಒಪ್ಪೋ ಜುಲೈನಲ್ಲಿ ಶೇಕಡಾ 11.21, ಶೇಕಡಾ 6.06 ಮತ್ತು ಶೇಕಡಾ 5.53 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು.
ಇದನ್ನೂ ಓದಿ : ಎಐ ರಚಿತ ಇಮೇಜ್ಗಳಿಗೆ ಕಾಪಿರೈಟ್ ಪಡೆಯುವಂತಿಲ್ಲ:ಅಮೆರಿಕ ಕೋರ್ಟ್