ನವದೆಹಲಿ : ಇತ್ತೀಚಿನ ಡೇಟಾ ಸೋರಿಕೆಯ ನಂತರ, ಸ್ಯಾಮ್‌ಸಂಗ್ ಜನರೇಟಿವ್ ಎಐ ಸಾಫ್ಟ್ವೇರ್ಗಳಾದ ಚಾಟ್‌ಜಿಪಿಟಿ, ಗೂಗಲ್ ಬಾರ್ಡ್ ಮತ್ತು ಬಿಂಗ್ ಎಐ ಚಾಟ್‌ಬಾಟ್‌ಗಳ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿಯು ತನ್ನ ದೊಡ್ಡ ವಿಭಾಗವೊಂದರ ಉದ್ಯೋಗಿಗಳಿಗೆ ಸೂಚಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಯಾಮ್‌ಸಂಗ್ ಎಂಜಿನಿಯರ್‌ಗಳು ಆಕಸ್ಮಿಕವಾಗಿ ChatGPT ಮೂಲಕ ಕಂಪನಿಯ ಸೂಕ್ಷ್ಮ ಡೇಟಾ ಸೋರಿಕೆ ಮಾಡಿದ ನಂತರ ಸ್ಯಾಮ್‌ಸಂಗ್ ಈ ನಿರ್ಧಾರಕ್ಕೆ ಬಂದಿದೆ.
ಎಐ ಜನರೇಟಿವ್ ಸಾಧನಗಳು ತಾವು ಬಳಸುವ ಡೇಟಾವನ್ನು ಎಕ್ಸಟರ್ನಲ್ ಸರ್ವರ್ಗಳಲ್ಲಿ ಸಂಗ್ರಹಿಸುತ್ತವೆ ಹಾಗೂ ಈ ಡೇಟಾ ಯಾವತ್ತಾದರೂ ದುರುಪಯೋಗವಾಗಬಹುದು ಎಂಬ ಕಾರಣದಿಂದ ಸ್ಯಾಮ್‌ಸಂಗ್ ಎಐ ಜನರೇಟಿವ್ ಟೂಲ್ಗಳನ್ನು ನಿರ್ಬಂಧಿಸಿದೆ. "ಚಾಟ್ ಜಿಪಿಟಿ ಮಾದರಿಯ ಎಐ ಜನರೇಟಿವ ಪ್ಲಾಟ್ಪಾರ್ಮ್ಗಳು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ಪ್ಲಾಟ್ಫಾರ್ಮ್ಗಳು ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ತಿಳಿದುಕೊಳ್ಳುವ ಸಮಯದಲ್ಲಿ ಅವುಗಳಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿಯಬೇಕು" ಎಂದು ಸ್ಯಾಮ್‌ಸಂಗ್ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಮೆಮೊದಲ್ಲಿ ಸೂಚಿಸಿದೆ.
ಸ್ಯಾಮ್‌ಸಂಗ್ ಎಂಜಿನಿಯರ್‌ಗಳು ಚಾಟ್‌ಜಿಪಿಟಿಯಲ್ಲಿ ಅಪ್ಲೋಡ್ ಮಾಡುವ ಮೂಲಕ ಆಂತರಿಕ ಸೋರ್ಸ್ ಕೋಡ್ ಅನ್ನು ಆಕಸ್ಮಿಕವಾಗಿ ಸೋರಿಕೆ ಮಾಡಿದ ನಂತರ ಕಂಪನಿಯು ಹೊಸ ನಿಯಮ ರೂಪಿಸಿದೆ ಎಂದು ಮೆಮೊ ಬಹಿರಂಗಪಡಿಸಿದೆ. "ಉದ್ಯೋಗಿಗಳ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಜನರೇಟಿವ್ AI ಅನ್ನು ಸುರಕ್ಷಿತವಾಗಿ ಬಳಸಲು, ಸುರಕ್ಷಿತ ವಾತಾವರಣವನ್ನು ರಚಿಸಲು ಹೆಚ್ಚು ಭದ್ರತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಆದಾಗ್ಯೂ, ಈ ಕ್ರಮಗಳನ್ನು ಸಿದ್ಧಪಡಿಸುವವರೆಗೆ, ನಾವು ಜನರೇಟಿವ್ ಎಐ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತಿದ್ದೇವೆ" ಎಂದು ಮೆಮೊ ಹೇಳಿದೆ. AI ಜನರೇಟಿವ್ ಸಾಫ್ಟವೇರ್ ಬಳಕೆಯ ಮೇಲಿನ ನಿಷೇಧವು ಸ್ಯಾಮ್‌ಸಂಗ್ ಮಾಲೀಕತ್ವದ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್ ಮತ್ತು ಫೋನ್‌ಗಳಿಗೆ ಅನ್ವಯಿಸುತ್ತದೆ.
ಸ್ಯಾಮ್‌ಸಂಗ್ ತನ್ನ ಸೆಮಿಕಂಡಕ್ಟರ್ ವಿಭಾಗದಲ್ಲಿನ ಇಂಜಿನಿಯರ್‌ಗಳಿಗೆ ಸೋರ್ಸ್ ಕೋಡ್‌ನಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡಲು ChatGPT ಬಳಸಲು ಅನುಮತಿ ನೀಡಿತ್ತು. ಉದ್ಯೋಗಿಗಳು ಹೊಸ ಪ್ರೋಗ್ರಾಂಗೆ ಸೋರ್ಸ್ ಕೋಡ್ ಮತ್ತು ಅದರ ಹಾರ್ಡ್‌ವೇರ್‌ಗೆ ಸಂಬಂಧಿಸಿದ ಆಂತರಿಕ ಸಭೆಯ ನೋಟ್ಸ್ಗಳಂತ ಉನ್ನತ ಮಟ್ಟದ ರಹಸ್ಯ ಡೇಟಾವನ್ನು ತಪ್ಪಾಗಿ ನೀಡಿದ್ದರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಇಂಥ ಮೂರು ಘಟನೆಗಳು ವರದಿಯಾಗಿವೆ. ಇಂಥ ತಪ್ಪುಗಳು ಮರುಕಳಿಸದಂತೆ ತಪ್ಪಿಸಲು, ಸ್ಯಾಮ್‌ಸಂಗ್ ಸೆಮಿಕಂಡಕ್ಟರ್ ಉದ್ಯೋಗಿಗಳ ಆಂತರಿಕ ಬಳಕೆಗಾಗಿ ತನ್ನದೇ ಆದ AI ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದಾಗ್ಯೂ, ಇದು ಗಾತ್ರದಲ್ಲಿ 1024 ಬೈಟ್‌ಗಳ ಅಡಿಯಲ್ಲಿ ಪ್ರಾಂಪ್ಟ್‌ಗಳನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸೀಮಿತವಾಗಿರುತ್ತದೆ.
AI ಸಾಧನಗಳು ಭವಿಷ್ಯದಲ್ಲಿ ಉಂಟುಮಾಡಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆ ಈಗಾಗಲೇ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಗಾಡ್‌ಫಾದರ್ ಆಫ್ AI ಎಂದೇ ಪ್ರಖ್ಯಾತರಾಗಿರುವ ಜೆಫ್ರಿ ಹಿಂಟನ್ ಎಐ ಅಪಾಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಎಐ ನ ಅಪಾಯಗಳ ಬಗ್ಗೆ ಜಗತ್ತಿನಲ್ಲಿ ಜಾಗೃತಿ ಮೂಡಿಸಲು ಅವರು ಗೂಗಲ್ನಲ್ಲಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ : ಮತ್ತೆ ಲಾಂಚ್ ಆಗಲಿದೆ ಸ್ಪೇಸ್ಎಕ್ಸ್ ಸ್ಟಾರ್ಶಿಪ್: ಈ ಬಾರಿ ವಿಫಲವಾಗಲ್ಲ ಎಂದ ಮಸ್ಕ್!