ನವದೆಹಲಿ: ಹೆಚ್ಚೆಚ್ಚು ಜನ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿರುವ ಮಧ್ಯೆ ದೇಶದಲ್ಲಿ ಕ್ಯೂಆರ್ ಕೋಡ್ ವಂಚನೆಗಳ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಮಂಗಳವಾರ ಬಿಡುಗಡೆಯಾದ ಹೊಸ ವರದಿ ತಿಳಿಸಿದೆ. 2017 ಮತ್ತು ಮೇ 31, 2023 ರ ನಡುವೆ ಕ್ಯೂಆರ್ ಕೋಡ್ಗಳು, ದುರುದ್ದೇಶಪೂರಿತ ಲಿಂಕ್ಗಳು ಅಥವಾ ಡೆಬಿಟ್ / ಕ್ರೆಡಿಟ್ ಕಾರ್ಡ್ ವಂಚನೆಗೆ ಸಂಬಂಧಿಸಿದ ಸುಮಾರು 20,662 ಪ್ರಕರಣಗಳು (ಅಥವಾ 41 ಪ್ರತಿಶತ) ಬೆಂಗಳೂರಿನಲ್ಲಿ ದಾಖಲಾಗಿವೆ ಎಂದು ವರದಿ ಬಹಿರಂಗಪಡಿಸಿದೆ.
ವಂಚನೆ ಹೇಗೆ?: ಪಾಲೊ ಆಲ್ಟೊ ನೆಟ್ವರ್ಕ್ಸ್ ಸಂಸ್ಥೆಯ ಪ್ರಕಾರ, ಹೆಚ್ಚಿನ ಕ್ಯೂಆರ್ ಕೋಡ್ಗಳು ಮೇಲ್ನೋಟಕ್ಕೆ ಒಂದೇ ರೀತಿಯಾಗಿ ಕಾಣಿಸುವುದರಿಂದ ಮತ್ತು ಅವುಗಳನ್ನು ಪ್ರತ್ಯೇಕಿಸುವುದು ಕಷ್ಟಕರವಾಗಿರುವುದರಿಂದ ಸೈಬರ್ ದಾಳಿಕೋರರು ನಿಜವಾದ ಕ್ಯೂಆರ್ ಕೋಡ್ ಅನ್ನು ತಮ್ಮದೇ ಆದ ರೀತಿಯಲ್ಲಿ ಬದಲಾಯಿಸುವ ಮೂಲಕ ವ್ಯವಹಾರ ನಡೆಯುವ ವೆಬ್ಸೈಟ್ಗಳಲ್ಲಿ ವಂಚನೆ ಎಸಗಬಹುದು.
ವ್ಯಕ್ತಿಗಳು ಈ ಬದಲಾದ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಅವರನ್ನು ಫಿಶಿಂಗ್ ಯುಆರ್ಎಲ್ಗೆ ರಿಡೈರೆಕ್ಟ್ ಮಾಡುತ್ತದೆ. ಆಗ ಅಲ್ಲಿ ಸೈಬರ್ ಅಪರಾಧಿಗಳು ಬಳಕೆದಾರರ ತಮ್ಮ ಐಡೆಂಟಿಟಿ ಪ್ರೂಫ್ಗಳನ್ನು ನೀಡುವಂತೆ ವಿನಂತಿಸಬಹುದು ಮತ್ತು ಇಮೇಲ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಬಹುದು.
ಪರ್ಯಾಯವಾಗಿ, ಇದು ಬಳಕೆದಾರರನ್ನು ವಿಶ್ವಾಸಾರ್ಹವಲ್ಲದ ಆ್ಯಪ್ ಸ್ಟೋರ್ಗೆ ರಿಡೈರೆಕ್ಟ್ ಮಾಡಬಹುದು ಮತ್ತು ಅಲ್ಲಿಂದ ದುರುದ್ದೇಶಪೂರಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡುವಂತೆ ಒತ್ತಾಯಿಸಬಹುದು. ಇಂಥ ಆ್ಯಪ್ಗಳು ಸಾಮಾನ್ಯವಾಗಿ ವೈರಸ್ಗಳು, ಸ್ಪೈವೇರ್, ಟ್ರೋಜನ್ಗಳು ಅಥವಾ ಇತರ ರೀತಿಯ ಮಾಲ್ವೇರ್ಗಳನ್ನು ಒಳಗೊಂಡಿರುತ್ತವೆ. ಇವುಗಳ ಮೂಲಕ ಡೇಟಾ ಕಳವು, ಗೌಪ್ಯತೆ ಉಲ್ಲಂಘನೆ, ರಾನ್ಸಮ್ವೇರ್ ದಾಳಿ ಮತ್ತು ಕೆಲ ಸಂದರ್ಭಗಳಲ್ಲಿ ಕ್ರಿಪ್ಟೋ-ಮೈನಿಂಗ್ ಸಹ ಮಾಡಬಹುದು ಎಂದು ವರದಿ ತಿಳಿಸಿದೆ.
ಇದಲ್ಲದೆ ಎವಿಲ್ ಟ್ವಿನ್ ಅಥವಾ ಹಾಟ್ ಸ್ಪಾಟ್ ಹನೀಪಾಟ್ ಮೂಲಕ ವಂಚನೆ ಎಸಗುವುದು ಮತ್ತೊಂದು ಮಾರ್ಗವಾಗಿದೆ. ಇದರಲ್ಲಿ ಹ್ಯಾಕರ್ಗಳು ಸುರಕ್ಷಿತವಲ್ಲದ ವೈಫೈ ಹಾಟ್ಸ್ಪಾಟ್ಗಳನ್ನು ಸೃಷ್ಟಿಸುತ್ತಾರೆ. ಇದರಲ್ಲಿ ಉಚಿತ ಇಂಟರ್ನೆಟ್ ಸಿಗುತ್ತದೆ ಎಂದು ಬಳಕೆದಾರರಿಗೆ ಹೇಳಿ, ಅದೇ ಇಂಟರ್ನೆಟ್ ಸಂಪರ್ಕದ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸುತ್ತಾರೆ.
ತಜ್ಞರ ಸಲಹೆ ಏನು?: ಅಮಾಯಕ ಬಳಕೆದಾರರು ತಮ್ಮ ಡಿವೈಸ್ ಅನ್ನು ಮೊದಲೇ ಹ್ಯಾಕ್ ಮಾಡಲಾದ ವೈಫೈ ಗೆ ಕನೆಕ್ಟ್ ಮಾಡಿದ ತಕ್ಷಣ ಅವರ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ಮಾಹಿತಿ ಹಾಗೂ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಕದಿಯಲಾಗುತ್ತದೆ. ಹೀಗಾಗಿ ಗ್ರಾಹಕರು ಸುರಕ್ಷಿತ ವೈಫೈ ಕನೆಕ್ಷನ್ಗಳಿಗೆ ಮಾತ್ರ ಕನೆಕ್ಟ್ ಆಗಬೇಕು ಹಾಗೂ ಅವುಗಳ ಮೂಲಕವೇ ಹಣಕಾಸು ವಹಿವಾಟುಗಳನ್ನು ನಡೆಸಬೇಕೆಂದು ತಜ್ಞರ ಸಲಹೆಯಾಗಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ S23 FE ಇದೇ ವಾರ ಬಿಡುಗಡೆ: ಬೆಲೆ 50 ಸಾವಿರದಿಂದ ಆರಂಭ