ನವದೆಹಲಿ: ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ನಾಳೆ (ಮೇ 26ರಂದು) ನಡೆಯಲಿದೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ದೇಶದ ಕೆಲವೇ ಸ್ಥಳಗಳಲ್ಲಿ ಮಾತ್ರ ಭಾಗಶಃ ಚಂದ್ರ ಗ್ರಹಣ ಕಾಣಿಸಿಕೊಳ್ಳಲಿದೆ.
ಭಾಗಶಃ ಚಂದ್ರ ಗ್ರಹಣವು ಈಶಾನ್ಯ ಪ್ರದೇಶ (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಕರಾವಳಿ ಭಾಗಗಳಲ್ಲಿ ಅಲ್ಪಾವಧಿಗೆ ಗೋಚರಿಸುತ್ತದೆ ಎಂದು ಐಎಂಡಿ ತಿಳಿಸಿದೆ.
ಉಳಿದಂತೆ ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿಯೂ ಗ್ರಹಣ ಗೋಚರಿಸಲಿದೆ.
ಗ್ರಹಣದ ಭಾಗಶಃ ಹಂತವು 15h 15m ISTಯಿಂದ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ. ಒಟ್ಟು ಹಂತವು 16h 39m ISTಯಿಂದ ಪ್ರಾರಂಭವಾಗಲಿದೆ. ಒಟ್ಟು ಹಂತವು 16h 58m ISTಯಲ್ಲಿ ಕೊನೆಗೊಳ್ಳುತ್ತದೆ. ಭಾಗಶಃ ಹಂತವು 18h 23m ISTಯಲ್ಲಿ ಕೊನೆಗೊಳ್ಳಲಿದೆ.