ವಾಷಿಂಗ್ಟನ್ : 63 ದಿನಗಳ ಕಾಲ ಮೌನವಾಗಿದ್ದ ನಾಸಾದ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ದಕ್ಷಿಣ ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಯಲ್ಲಿರುವ ಮಿಷನ್ ನಿಯಂತ್ರಕಗಳೊಂದಿಗೆ ಮರಳಿ ಸಂಪರ್ಕ ಸಾಧಿಸಿದೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. "ಬಾಹ್ಯಾಕಾಶ ನೌಕೆಯೊಂದು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಯಲು 63 ದಿನ ಕಾಯುವುದು ಸುದೀರ್ಘ ಸಮಯವಾಗಿದೆ. ಆದರೆ ಬಂದ ಮಾಹಿತಿಯ ಪ್ರಕಾರ ಮತ್ತೊಂದು ಪ್ರಪಂಚದಲ್ಲಿರುವ ನೌಕೆ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಸೂಚಿಸಿದೆ" ಎಂದು ಮಿಷನ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಸಾದ ಮಾರ್ಸ್ ಪರ್ಸೆವೆರೆನ್ಸ್ ರೋವರ್‌ಗೆ ಜೋಡಿಸಲಾದ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ಫೆಬ್ರವರಿ 2021 ರಲ್ಲಿ ಮಂಗಳ ಗ್ರಹದ ಮೇಲೆ ಇಳಿದಿತ್ತು. ಇದು ಏಪ್ರಿಲ್ 19, 2021 ರಂದು ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿತ್ತು. ಮೂಲತಃ ತನ್ನ ಪ್ರವರ್ತಕ ತಂತ್ರಜ್ಞಾನವನ್ನು ಸಾಬೀತುಪಡಿಸಲು ಇಂಜೆನ್ಯೂಟಿ ಮಾರ್ಸ್ನ ಕೇವಲ ಐದು ಪರೀಕ್ಷಾ ಹಾರಾಟಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈ ಎಲ್ಲಾ ನಿರೀಕ್ಷೆಗಳನ್ನು ಮೀರಿದ ಇಂಜೆನ್ಯೂಟಿ ಮಾರ್ಸ್ ಮಂಗಳ ಗ್ರಹದ ಮೇಲೆ ದಾಖಲೆಯ 52 ಹಾರಾಟಗಳನ್ನು ಪೂರ್ಣಗೊಳಿಸಿದೆ.
ಆದರೆ ಏಪ್ರಿಲ್ 26 ರಂದು ತನ್ನ 52 ನೇ ಹಾರಾಟದಲ್ಲಿ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಮಂಗಳನ ಮೇಲ್ಮೈಗೆ ಇಳಿಯುತ್ತಿದ್ದಂತೆ ಭೂಮಿಯ ಮೇಲಿನ ಮಿಷನ್ ಕಂಟ್ರೋಲ್ ಜೊತೆಗೆ ಸಂಪರ್ಕ ಕಳೆದುಕೊಂಡಿತ್ತು. ಹೆಲಿಕಾಪ್ಟರ್‌ನ ಲ್ಯಾಂಡಿಂಗ್ ಸ್ಥಳ ಮತ್ತು ಪರ್ಸೆವೆರೆನ್ಸ್ ರೋವರ್‌ನ ಸ್ಥಾನದ ನಡುವೆ ಬೆಟ್ಟವೊಂದು ಇರುವುದರಿಂದ ಎರಡರ ನಡುವಿನ ಸಂವಹನಕ್ಕೆ ತಡೆಯಾಗಿರಬಹುದು ಎಂದು ಮಿಷನ್ ಅಧಿಕಾರಿಗಳು ಊಹಿಸಿದ್ದಾರೆ. ರೋವರ್ JPL ನಲ್ಲಿ ಹೆಲಿಕಾಪ್ಟರ್ ಮತ್ತು ಮಿಷನ್ ನಿಯಂತ್ರಕಗಳ ನಡುವೆ ರೇಡಿಯೋ ರಿಲೇ ಆಗಿ ಕಾರ್ಯನಿರ್ವಹಿಸುತ್ತದೆ.
ಹೆಲಿಕಾಪ್ಟರ್ ಅನ್ನು ಮರುಸ್ಥಾಪಿಸುವುದು ಮತ್ತು ಮಂಗಳದ ಮೇಲ್ಮೈಯ ಚಿತ್ರಗಳನ್ನು ಸೆರೆಹಿಡಿದು ರೋವರ್‌ನ ವಿಜ್ಞಾನಿಗಳ ತಂಡಕ್ಕೆ ಕಳುಹಿಸುವುದು 363 ಮೀಟರ್ ಉದ್ದದ ಮತ್ತು 139 ಸೆಕೆಂಡ್ ಅವಧಿಯ 52ನೇ ಹಾರಾಟದ ಉದ್ದೇಶವಾಗಿತ್ತು. "ರೋವರ್ ಮತ್ತು ಹೆಲಿಕಾಪ್ಟರ್ ಪ್ರಸ್ತುತ ಅನ್ವೇಷಿಸುತ್ತಿರುವ ಜೆಜೆರೊ ಕ್ರೇಟರ್‌ನ ಭಾಗವು ಸಾಕಷ್ಟು ಒರಟಾದ ಭೂಪ್ರದೇಶವನ್ನು ಹೊಂದಿದೆ. ಇದು ಸಂಪರ್ಕಕ್ಕೆ ತಡೆಯನ್ನುಂಟು ಮಾಡುತ್ತದೆ" ಎಂದು ಜೆಪಿಎಲ್‌ನ ಇಂಜೆನ್ಯೂಟಿ ಟೀಮ್ ಲೀಡ್ ಜಾಶ್ ಆಂಡರ್ಸನ್ ತಿಳಿಸಿದ್ದಾರೆ.
"ಪರ್ಸೆವೆರೆನ್ಸ್ಗಿಂತ ಇಂಜೆನ್ಯೂಟಿ ಮುಂದೆ ಇರುವಂತೆ ನೋಡಿಕೊಳ್ಳುವುದು ತಂಡದ ಗುರಿಯಾಗಿತ್ತು. ಇದು ಸಾಂದರ್ಭಿಕವಾಗಿ ಸಂಪರ್ಕ ಮಿತಿಗಳನ್ನು ಮೀರಿ ತಾತ್ಕಾಲಿಕವಾಗಿ ಚಲಿಸುವುದನ್ನು ಒಳಗೊಂಡಿರುತ್ತದೆ. ಪರ್ಸೆವೆರೆನ್ಸ್ ಸಂಪರ್ಕ ಶ್ರೇಣಿಯಲ್ಲಿ ಹಿಂತಿರುಗಿದ್ದು ಮತ್ತು ಫ್ಲೈಟ್ 52 ರ ದೃಢೀಕರಣ ಬಂದಿರುವುದನ್ನು ತಿಳಿಸಲು ಉತ್ಸುಕರಾಗಿದ್ದೇವೆ" ಎಂದು ಅವರು ಹೇಳಿದರು. ಹೊಸ ಫ್ಲೈಟ್ ಡೇಟಾವು ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಮತ್ತಷ್ಟು ಪರಿಶೀಲನೆಗಳು ಅದನ್ನು ಖಚಿತಪಡಿಸಿದರೆ, ಮುಂದಿನ ಎರಡು ವಾರಗಳಲ್ಲಿ ಹೆಲಿಕಾಪ್ಟರ್ ಮತ್ತೆ ಹಾರಾಟ ನಡೆಸಬಹುದು ಎಂದು ತಂಡ ಹೇಳಿದೆ.
ಇದನ್ನೂ ಓದಿ : Hacking: ದೋಷಪೂರಿತ ಪ್ಲಗಿನ್; 2 ಲಕ್ಷಕ್ಕೂ ಅಧಿಕ ವರ್ಡ್ಪ್ರೆಸ್ ವೆಬ್ಸೈಟ್ ಹ್ಯಾಕಿಂಗ್ ಸಾಧ್ಯತೆ