ನವದೆಹಲಿ: ಮಾರುತಿ ಸುಜುಕಿ ಸೋಮವಾರ ತನ್ನ ಎಲ್ಲ ಮಾದರಿ ಕಾರುಗಳ ಬೆಲೆಗಳನ್ನು ಜನವರಿ 16 ರಿಂದ ಜಾರಿಗೆ ಬರುವಂತೆ ಸುಮಾರು ಶೇ 1.1ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಒಟ್ಟಾರೆ ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಅಗತ್ಯತೆಗಳ ಪಾಲನೆಯಿಂದ ಹೆಚ್ಚಿದ ವೆಚ್ಚದ ಒತ್ತಡದಿಂದಾಗಿ ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸುವ ಉದ್ದೇಶವನ್ನು ಕಂಪನಿ ಡಿಸೆಂಬರ್ 2022 ರಲ್ಲಿ ಪ್ರಕಟಿಸಿತ್ತು. ಕಂಪನಿಯು ವೆಚ್ಚ ಕಡಿಮೆ ಮಾಡಲು ಮತ್ತು ಬೆಲೆಯೇರಿಕೆಯನ್ನು ಭಾಗಶಃ ಸರಿದೂಗಿಸಲು ಗರಿಷ್ಠ ಪ್ರಯತ್ನ ಮಾಡುತ್ತದೆ. ಆದರೂ ಒಂದಿಷ್ಟು ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಅದು ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.
ಆದಾಗ್ಯೂ, ಪ್ರತಿ ಕಾರಿನ ಮಾದರಿಯ ಪ್ರಕಾರ ಹೆಚ್ಚಳದ ಶೇಕಡಾವಾರು ಅನ್ವಯವಾಗುತ್ತದೆ. ಇದೀಗ ಆಲ್ಟೊದಿಂದ ಹಿಡಿದು ಗ್ರ್ಯಾಂಡ್ ವಿಟಾರಾವರೆಗಿನ ಹಲವು ಮಾದರಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಮಾದರಿಯಲ್ಲಿ ಎಷ್ಟು ಹೆಚ್ಚಿಸಲಾಗಿದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ. ಹೊಸ ವರ್ಷದ ಸಂದರ್ಭದಲ್ಲಿ, ಕಂಪನಿ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿತ್ತು. ಇದರಿಂದಾಗಿ ಗ್ರಾಹಕರು ವಾಹನಗಳ ಖರೀದಿಯಲ್ಲಿ 38,000 ರೂಪಾಯಿಗಳವರೆಗೆ ಉಳಿತಾಯ ಮಾಡಬಹುದಿತ್ತು. ಆಲ್ಟೊ ಕೆ-10, ಎಸ್-ಪ್ರೆಸ್ಸೊ, ಮಾರುತಿ ವ್ಯಾಗನ್ಆರ್, ಮಾರುತಿ ಸೆಲೆರಿಯೊ, ಆಲ್ಟೊ 800, ಡಿಜೈರ್ ಮತ್ತು ಮಾರುತಿ ಸ್ವಿಫ್ಟ್ ಮಾದರಿಗಳ ಮೇಲೆ ಇಂಥ ರಿಯಾಯಿತಿ ನೀಡಲಾಗುತ್ತಿತ್ತು.
ಮಧ್ಯಮ ವರ್ಗಕ್ಕೆ ಬೆಲೆ ಏರಿಕೆ ಹೊರೆ: ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಆಟೋ ಕಂಪನಿಗಳು ಕಳೆದ ಎರಡು ವರ್ಷಗಳಿಂದ ನಿಯಮಿತವಾಗಿ ಬೆಲೆಗಳನ್ನು ಹೆಚ್ಚಿಸುತ್ತಿವೆ. ಆಟೋ ಕಂಪನಿಗಳು ಮಾಡಿರುವ ಬೆಲೆ ಏರಿಕೆಯು ಕಡಿಮೆ - ಮಧ್ಯಮ ಆದಾಯದ ಖರೀದಿದಾರರಿಗೆ ಭಾರ ಎನಿಸಲಿವೆ ಎಂದು ಪ್ರಭುದಾಸ್ ಲಿಲ್ಲಾಧರ್‌ನ ಸಂಶೋಧನಾ ವಿಶ್ಲೇಷಕ ಮಾನ್ಸಿ ಲಾಲ್ ಹೇಳಿದ್ದಾರೆ. ಅಲ್ಲದೆ, ಏರುತ್ತಿರುವ ಬಡ್ಡಿದರಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲದಿರುವುದು ಭಾರತದ ಉದ್ಯಮದ ಮೇಲೆ ಪ್ರಭಾವ ಬೀರಲಿದೆ. ಈ ಕಾರಣದಿಂದ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.
ಬೆಲೆಯಲ್ಲಿನ ಹೆಚ್ಚಳವು ಯಾವಾಗಲೂ ಮಾರಾಟದ ಮೇಲೆ ನಿರ್ದಿಷ್ಟ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರೆ ಬೆಲೆಗಳು ಎಷ್ಟು ಹೆಚ್ಚಾಗುತ್ತವೆ ಮತ್ತು ಇನ್ಪುಟ್ ವೆಚ್ಚ ಮತ್ತು ವಿದೇಶಿ ವಿನಿಮಯ ಏನಾಗುತ್ತವೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಇವು ಯಾವಾಗಲೂ ಇರುವ ಅನಿಶ್ಚಿತತೆಗಳಾಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್ ಸಿ ಭಾರ್ಗವ ಮಾಧ್ಯಮಗಳಿಗೆ ತಿಳಿಸಿದರು.
ಕೆಲ ತಿಂಗಳಿಂದ ಪುನಶ್ಚೇತನ: ಆದಾಗ್ಯೂ, ಕಳೆದ ಕೆಲವು ತಿಂಗಳುಗಳಲ್ಲಿ ದೇಶೀಯ ಕಾರು ಉದ್ಯಮವು ಪುನಶ್ಚೇತನಗೊಂಡಿದೆ ಮತ್ತು ಸೆಮಿಕಂಡಕ್ಟರ್ ಕೊರತೆಯು 2023 ರಲ್ಲಿ ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ ನೋಡಿದರೆ ಮುಂದಿನ ವರ್ಷವು ಉದ್ಯಮಕ್ಕೆ ಸಮಂಜಸವಾದ ಉತ್ತಮ ವರ್ಷವಾಗಲಿದೆ ಎಂದು ನಮ್ಮ ಅಂದಾಜಿದೆ. 2022 ಕ್ಕಿಂತ ಉತ್ತಮವಾಗಿ ಸಾಧಿಸಲಾಗದಿದ್ದರೂ ಕನಿಷ್ಠ ಅಷ್ಟನ್ನಾದರೂ ಸಾಧಿಸಬೇಕೆಂದು ಎಂದು ಭಾರ್ಗವ ಹೇಳಿದರು.
ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಮಾರು ಶೇಕಡಾ 40ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇದಕ್ಕೂ ಮೊದಲು, ಮಾರುತಿಯು ತನ್ನ ಹ್ಯಾಚ್‌ಬ್ಯಾಕ್ ಮಾದರಿಗಳಾದ ಸ್ವಿಫ್ಟ್ ಮತ್ತು ಎಲ್ಲಾ ಸಿಎನ್‌ಜಿ ರೂಪಾಂತರಗಳ ಬೆಲೆಗಳನ್ನು ಇನ್‌ಪುಟ್ ವೆಚ್ಚದ ಒತ್ತಡದ ಹಿನ್ನೆಲೆಯಲ್ಲಿ ಹೆಚ್ಚಿಸಿತ್ತು. ಕಂಪನಿ ಜನವರಿ 2021 ರಿಂದ ಮಾರ್ಚ್ 2022 ರವರೆಗೆ ಪ್ರಯಾಣಿಕ ವಾಹನ ಬೆಲೆಗಳನ್ನು ಸುಮಾರು ಶೇ 8 ರಷ್ಟು ಹೆಚ್ಚಿಸಿದೆ. ಮಾರುತಿ ಸುಜುಕಿ ನಂತರ, ಟಾಟಾ, ಹ್ಯುಂಡೈ ಮತ್ತು ಮರ್ಸಿಡಿಸ್ ಬೆಂಜ್ ಕಂಪನಿಗಳು ಸಹ ಕಾರುಗಳ ಬೆಲೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ವಯಾಕಾಮ್ 18 ಸಂಸ್ಥೆಗೆ ಮಹಿಳಾ ಐಪಿಎಲ್ ಪ್ರಸಾರದ ಹಕ್ಕು.. ₹951 ಕೋಟಿ ರೂಪಾಯಿಗೆ ಬಿಡ್