ನವದೆಹಲಿ: ದೊಡ್ಡ ಜಾಹೀರಾತುದಾರರು ಟ್ವಿಟರ್ (ಈಗ ಎಕ್ಸ್)ನಿಂದ ದೂರವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅದು ದಿವಾಳಿಯಾಗಬಹುದು ಎಂದು ಬಿಬಿಸಿ ವರದಿ ಮಾಡಿದೆ. 13 ಬಿಲಿಯನ್ ಡಾಲರ್ ಸಾಲ ಮಾಡಿ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು ಖರೀದಿಸಿದ್ದರು. ಅದಕ್ಕಾಗಿ ಕಂಪನಿ ಪ್ರತಿವರ್ಷ 1.2 ಬಿಲಿಯನ್ ಡಾಲರ್ನಷ್ಟು ದೊಡ್ಡ ಮೊತ್ತದ ಬಡ್ಡಿ ಪಾವತಿಸುತ್ತಿದೆ.
ಟ್ವಿಟರ್ ಖರೀದಿಸಿದ ಕೆಲ ದಿನಗಳ ನಂತರ ಮಸ್ಕ್ ಅದರ ಹೆಸರನ್ನು ಎಕ್ಸ್ ಎಂದು ಬದಲಾಯಿಸಿದ್ದರು. ಈ ಮಧ್ಯೆ ಎಕ್ಸ್ಗೆ ಜಾಹೀರಾತು ನೀಡುತ್ತಿದ್ದ ದೊಡ್ಡ ದೊಡ್ಡ ಕಂಪನಿಗಳು ದೂರ ಸರಿಯುತ್ತಿರುವುದರಿಂದ ಎಕ್ಸ್ ತನ್ನ ಸಿಬ್ಬಂದಿಗೆ ಸಂಬಳ ಪಾವತಿಸುವುದು ಕಷ್ಟವಾಗಬಹುದು ಮತ್ತು ಬಡ್ಡಿ ಪಾವತಿಸಲು ಸಹ ಸಾಧ್ಯವಾಗದಿರಬಹುದು ಹಾಗೂ ಇದರಿಂದ ಕೊನೆಗೆ ಕಂಪನಿ ದಿವಾಳಿಯಾಗಬಹುದು ಎಂದು ಬಿಬಿಸಿ ಹೇಳಿದೆ. ಇಂಥದೊಂದು ಸನ್ನಿವೇಶ ಸೃಷ್ಟಿಯಾಗುವುದನ್ನು ಮಸ್ಕ್ ಎಂದಿಗೂ ಬಯಸಲಾರರು ಎಂದು ಬಿಬಿಸಿ ತಿಳಿಸಿದೆ.
44 ಬಿಲಿಯನ್ ಡಾಲರ್ ನೀಡಿ ಖರೀದಿಸಿದ ಕಂಪನಿ ದಿವಾಳಿಯಾದರೆ ಏನಾಗಬಹುದು ಎಂಬುದು ಊಹಿಸಲೂ ಸಾಧ್ಯವಿಲ್ಲ. ಆದಾಗ್ಯೂ ಅಂಥದೊಂದು ಸಾಧ್ಯತೆ ಕಾಣಿಸುತ್ತಿದೆ. ಡಿಸ್ನಿ ಹಾಗೂ ಆ್ಯಪಲ್ನಂಥ ದೈತ್ಯ ಕಂಪನಿಗಳು ಈಗಾಗಲೇ ಎಕ್ಸ್ನಲ್ಲಿ ಜಾಹೀರಾತು ನೀಡುವುದನ್ನು ನಿಲ್ಲಿಸಿವೆ. ಈ ಮಧ್ಯೆ ಕಂಪನಿಗಳ ವಿರುದ್ಧ ಕೆಟ್ಟ ಶಬ್ದ (Go f*** yourself) ಬಳಸಿದ್ದ ಮಸ್ಕ್, ಜಾಹೀರಾತು ನೀಡುವುದಿಲ್ಲವಾದರೆ ಹಾಳಾಗಿ ಹೋಗಿ ಎಂಬರ್ಥದಲ್ಲಿ ಮಾತನಾಡಿದ್ದರು.
ಎಕ್ಸ್ನಲ್ಲಿ ತಾನು ಜಾಹೀರಾತು ಪ್ರದರ್ಶಿಸುತ್ತಿಲ್ಲ ಎಂದು ರಿಟೇಲ್ ದೈತ್ಯ ವಾಲ್ಮಾರ್ಟ್ ಕೂಡ ದೃಢಪಡಿಸಿದೆ. "ನಮ್ಮ ಗ್ರಾಹಕರನ್ನು ತಲುಪಲು ಇತರ ಪ್ಲಾಟ್ಫಾರ್ಮ್ಗಳನ್ನು ನಾವು ಕಂಡುಕೊಂಡಿರುವುದರಿಂದ ನಾವು ಎಕ್ಸ್ನಲ್ಲಿ ಜಾಹೀರಾತು ನೀಡುತ್ತಿಲ್ಲ" ಎಂದು ವಾಲ್ಮಾರ್ಟ್ ವಕ್ತಾರರು ಹೇಳಿದ್ದಾರೆ.
ಕಳೆದ ತಿಂಗಳು ಮಸ್ಕ್ ಯಹೂದಿ ವಿರೋಧಿ ಪೋಸ್ಟ್ ಒಂದನ್ನು ಅನುಮೋದಿಸಿದ ನಂತರ ಇತರ ಕಂಪನಿಗಳ ಜೊತೆಗೆ ವಾಲ್ಮಾರ್ಟ್ ಎಕ್ಸ್ನಿಂದ ದೂರವಾಗಿತ್ತು. ಇಂಥ ಪೋಸ್ಟ್ ಅನುಮೋದಿಸಿದ್ದಕ್ಕಾಗಿ ಮಸ್ಕ್ ನಂತರ ಕ್ಷಮೆಯಾಚಿಸಿದ್ದರು ಎಂಬುದು ಬೇರೆ ಮಾತು. ಆ್ಯಪಲ್, ಡಿಸ್ನಿ, ಐಬಿಎಂ, ಕಾಮ್ಕಾಸ್ಟ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಕಂಪನಿಗಳು ಇನ್ನು ಮುಂದೆ ಎಕ್ಸ್ನಲ್ಲಿ ಜಾಹೀರಾತು ಪ್ರದರ್ಶಿಸುತ್ತಿಲ್ಲ.
2022 ರಲ್ಲಿ, ಟ್ವಿಟರ್ನ ಜಾಹೀರಾತು ಆದಾಯ ಸುಮಾರು 4 ಬಿಲಿಯನ್ ಡಾಲರ್ ಆಗಿತ್ತು. ಈ ವರ್ಷ ಇದು 1.9 ಬಿಲಿಯನ್ ಡಾಲರ್ಗೆ ಇಳಿಯಲಿದೆ ಎಂದು ಇನ್ಸೈಡರ್ ಇಂಟೆಲಿಜೆನ್ಸ್ ಅಂದಾಜಿಸಿದೆ. ದೊಡ್ಡ ಜಾಹೀರಾತುದಾರರ ವಿರುದ್ಧ ಮಸ್ಕ್ ಅವರ ಆಕ್ರೋಶದ ನಂತರ, ದೊಡ್ಡ ಕಂಪನಿಗಳಿಂದ ಜಾಹೀರಾತು ನಷ್ಟವನ್ನು ಸರಿದೂಗಿಸಲು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪನಿಗಳನ್ನು ಸಂಪರ್ಕಿಸುವ ಗುರಿಯನ್ನು ಎಕ್ಸ್ ಹೊಂದಿದೆ ಎಂದು ವರದಿಯಾಗಿದೆ.
(ಐಎಎನ್ಎಸ್)
ಇದನ್ನೂ ಓದಿ : ಸೀಕ್ರೆಟ್ ಕೋಡ್ ಫೀಚರ್ ತಂದ ವಾಟ್ಸ್ಆ್ಯಪ್; ಗುಪ್ತವಾಗಿಡಬಹುದು ನಿಮ್ಮ ಚಾಟ್ಸ್!